ಕಾರವಾರ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಬಾಡದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೂತನವಾಗಿ ನಿರ್ಮಾಣವಾದ 5 ಕೊಠಡಿಗಳ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ, ಕನ್ನಡ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನಕ್ಕೆ ತೆರಳಿದ್ದಾರೆ. ನಾನೂ ಕೂಡ ಕನ್ನಡ ಶಾಲೆಯಲ್ಲಿ ಕಲಿತಿದ್ದೇನೆ. ಕನ್ನಡ ಶಾಲೆಗಳ ಏಳಿಗೆಗೆ ಸರ್ಕಾರ ಬದ್ದವಾಗಿದೆ. ಎಲ್ಲ ರೀತಿಯ ಸೌಲಭ್ಯಗಳು ಸರ್ಕಾರಿ ಕನ್ನಡ ಶಾಲೆಯ ಮಕ್ಕಳಿಗೆ ಲಭಿಸಬೇಕು. ಈಗಿನ ಮಕ್ಕಳು ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು. ಕನ್ನಡ ಕಲಿತವರು ಎಲ್ಲ ಭಾಷೆಯನ್ನು ಸುಲಲಿತವಾಗಿ ಕಲಿಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಮಕ್ಕಳು ಅಭ್ಯಾಸವನ್ನು ಸರಿಯಾಗಿ ಮಾಡಬೇಕು. ಶಾಲೆಗೆ ಹೊರಡುವ ಮೊದಲು ತಂದೆ ತಾಯಿಗೆ ನಮಸ್ಕರಿಸಬೇಕು. ಗುರುಗಳನ್ನು ಗೌರವಿಸಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಶಿಕ್ಷಣಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಕಾರವಾರ ತಾಲ್ಲೂಕಿನ ಸಾವಂತವಾಡದ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಶಾಲೆಯಲ್ಲಿ ಹೇಳಿ ಕೊಡುವ ಪಾಠಗಳನ್ನು ಮಕ್ಕಳು ನಿರಂತರವಾಗಿ ಅಭ್ಯಾಸ ಮಾಡಬೇಕು. ತರಗತಿಗಳಲ್ಲಿ ಹೇಳಿದ ಪಾಠಗಳನ್ನು ಅದೇ ದಿನ ಅಭ್ಯಾಸ ಮಾಡಬೇಕು. ಆಟದ ಜತೆಗೆ ಪಾಠದ ಕಡೆಗೂ ಗಮನ ಹರಿಸಬೇಕು. ಶಿಕ್ಷಕರು ಸಹ ಮಕ್ಕಳನ್ನು ಆತ್ಮೀಯವಾಗಿ ಕಂಡು ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.