ಸಿದ್ದಾಪುರ: ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಇದ್ದರೆ ಮಾತ್ರ ಅದು ಅಜರಾಮರವಾಗಿರುತ್ತದೆ. ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕ ಕಂಪನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಮತ್ತು ಮಾದರಿ ಆಗಿದೆ ಎಂದು ಲೆಕ್ಕಪರಿಶೋಧಕ ಎಂ.ಎಸ್.ಶೆಟ್ಟಿ ಶಿರಸಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕ ಕಂಪನಿಯ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಆಡಳಿತ ಕಚೇರಿ ಕಟ್ಟಡದ ಉದ್ಘಾಟಿಸಿ ಮಾತನಾಡಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ಕಂಪನಿ ಸಾಗಿ ಬಂದ ಕುರಿತು ಮಾತನಾಡಿ ಮುಂದಿನ ಉದ್ದೇಶವನ್ನು ವಿವರಿಸಿದರು. ಶಿರಸಿಯ ಮಧುರಾ ಇಂಡಸ್ಟ್ರಿ ಮಾಲೀಕ ಶ್ರೀಕಾಂತ ಹೆಗಡೆ, ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ವರ್ತಕ ಅನಂತ ಶಾನಭಾಗ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ದರ್ಶನ ಹೆಗಡೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು, ಸಿಬ್ಬಂದಿಗಳಿದ್ದರು.
ನಾಗಪತಿ ಹೆಗಡೆ ಹರ್ತೆಬೈಲ್ ವಂದಿಸಿದರು.ಇದಕ್ಕೂ ಪೂರ್ವದಲ್ಲಿ ನೂತನ ಕಟ್ಟಡದ ಕಚೇರಿಯಲ್ಲಿ ಲಕ್ಷ್ಮಿಪೂಜೆ ನಡೆಯಿತು.