ಕೋಲಾರ: ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ಯುವತಿ ಡಾ.ಕೆ.ಪಿ.ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಸ್ವತಂತ್ರ ತಜ್ಞೆಯಾಗಿ ನೇಮಕವಾಗಿದ್ದಾರೆ.
ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿ ಪುತ್ರಿಯಾಗಿರುವ ಅಶ್ವಿನಿ ಅವರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಎಂ.ಫಿಲ್., ಪಿಎಚ್.ಡಿ ಪದವಿ ಮುಗಿಸಿದ್ದಾರೆ. ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸ್ವತಂತ್ರ ನೇಮಕಕ್ಕೆ ಸಂಬಂಧಿಸಿದಂತೆ ಹಲವರ ಹೆಸರು ಕೇಳಿಬಂದಿತ್ತು. ಆದರೆ, ಅಕ್ಟೋಬರ್ 7ರಂದು ಮುಕ್ತಾಯವಾದ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನದಲ್ಲಿ ಅಶ್ವಿನಿ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಡಾ.ಕೆ.ಪಿ.ಅಶ್ವಿನಿ ಅವರು ಜಿನೆವಾದಲ್ಲಿ ನವೆಂಬರ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅಧಿಕಾರ ಅವಧಿ ಆರು ವರ್ಷಗಳಾಗಿದ್ದು, ಈ ಹುದ್ದೆಗೆ ನೇಮಕವಾದ ಏಷ್ಯಾ ಮತ್ತು ಭಾರತದ ಮೊದಲ ವ್ಯಕ್ತಿ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಜಾಗತಿಕ ಮಟ್ಟದಲ್ಲಿಯ ವರ್ಣಭೇದ ನೀತಿ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾ (ವಿದೇಶಿಯರ ಬಗ್ಗೆ ಭಯ), ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ಇವರು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಬಗ್ಗೆ ಮಂಡಳಿಗೆ ಅವರು ಕಾಲಕಾಲಕ್ಕೆ ವರದಿ ಹಾಗೂ ಸಲಹೆ ನೀಡಲಿದ್ದಾರೆ.
ಅಶ್ವಿನಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕಿಯಾಗಿ, ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾ ಒಡಿಶಾ ಮತ್ತು ಛತ್ತೀಸಗಡ್ ಜಿಲ್ಲೆಗಳಲ್ಲಿನ ಆದಿವಾಸಿಗಳ ಮೇಲೆ ಅಲ್ಲಿಯ ಗಣಿಗಾರಿಕೆಯಿಂದ ಆದ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರು.