ಕುಮಟಾ: ನಾಮಧಾರಿ ಸಮಾಜದ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಖುಷಿಯ ಸಂಗತಿ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದ ಮೇಲಂತಸ್ತಿನ ಶಿಲಾನ್ಯಾಸ, ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸಾಧರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿ, ಮಾತನಾಡಿದರು. ಹೆಗಡೆಯ ದೀಕ್ಷಾ ನಾಯ್ಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಬಾಡದ ನಾಗಾಂಜಲಿ ನಾಯ್ಕ ಅವರು ಕೂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇಂಥ ಪ್ರತಿಭಾವಂತ ಮಕ್ಕಳು ಸಮಾಜದ ಆಸ್ತಿ. ಇವರಿಂದ ನನಗೂ ರಾಜ್ಯ ಮಟ್ಟದಲ್ಲಿ ಕೀರ್ತಿ ಲಭಿಸುವಂತಾಗಿದೆ. ಸಮಾಜದ ಅಭಿವೃದ್ಧಿಗೆ ಸದಾ ನನ್ನ ಕೈಲಾದ ಸೇವೆ ಮಾಡುತ್ತ ಬಂದಿದ್ದೇನೆ. ಮೇಲಂತಸ್ತಿನ ಕಟ್ಟಡಕ್ಕೆ 50 ಲಕ್ಷ ರೂ. ಹಣವನ್ನು ಸರ್ಕಾರದಿಂದ ಮಂಜೂರಿ ಮಾಡಿಸಿಕೊಟ್ಟಿದ್ದೇನೆ. ವೈಯಕ್ತಿಕವಾಗಿ ನಾನು 1 ಲಕ್ಷ ರೂ. ಸಮಾಜದ ಕಟ್ಟಡಕ್ಕೆ ನೀಡುತ್ತೇನೆ. ಸಮಾಜದ ಬೆಂಬಲ ಸದಾ ನನಗಿರಲಿ ಎಂದರು.
ಉದ್ಯಮಿ ಎಚ್.ಆರ್.ನಾಯ್ಕ ಕೋನಳ್ಳಿ ಮಾತನಾಡಿ, ಸಮಾಜದ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ನಾವು ಸಮಾಜದ ಮಕ್ಕಳ ಅಭಿವೃದ್ಧಿಗೆ ಒಂದಾಗಿ ದುಡಿಯುವ ಮೂಲಕ ನಮ್ಮ ಸಮಾಜದ ಸಂಸ್ಥಾಪಕರಾದ ದಿ.ಡಾ.ಎಂ.ಡಿ.ನಾಯ್ಕ ಸೇರಿದಂತೆ ಹಲ ಹಿರಿಯರ ಆಶಯಗಳನ್ನು ಈಡೇರಿಸಲು ಎಲ್ಲರೂ ಜೊತೆಗೂಡಿ ಶ್ರಮಿಸಬೇಕು ಎಂದರು. ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್ ಪ್ರಾಂಶುಪಾಲ ಸತೀಶ ಬಿ.ನಾಯ್ಕ ಮಾತನಾಡಿ, ಪ್ರತಿಯೊಬ್ಬರೂ ಸಮಾಜದಿಂದ ಒಂದಲ್ಲ ಒಂದು ರೀತಿಯ ಸಹಕಾರ ಪಡೆದಿರುತ್ತಾರೆ. ಅದಕ್ಕೆ ಪ್ರತಿಯಾಗಿ ನಾವು ಕೂಡ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಈ ಕಾರ್ಯಕ್ರಮದಲ್ಲಿ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಆಸ್ತಿಯಾಗಬೇಕು. ಸಮಾಜದ ಅಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡುವ ಮೂಲಕ ಸಮಾಜವನ್ನು ಬಲವಾಗಿ ಸಂಘಟಿಸುವ ಕಾರ್ಯ ಪ್ರತಿಯೊಬ್ಬರಿಂದಾಗಬೇಕು ಎಂದರು.
ಅಘನಾಶಿನಿ ಪ್ರೌಢಶಾಲೆ ಮುಖ್ಯೋಧ್ಯಾಪಕಿ ಮಮತಾ ನಾಯ್ಕ ಮಾತನಾಡಿ, ಶ್ರಮ ನಿಂತ ನೀರಾಗದೇ ನಿರಂತರ ಹರಿಯುವ ನೀರಾದರೆ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವ ಮೂಲಕ ಒಳ್ಳೆಯ ಸ್ಥಾನ ಪಡೆದು, ಸಮಾಜದ ಆಸ್ತಿಯಾಗಬೇಕು. ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸುವ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎಂದರು. ಸನ್ಮಾನ ಸ್ವೀಕರಿಸಿದ ದೀಕ್ಷಾ ಪಾಂಡುರAಗ ನಾಯ್ಕ ಮಾತನಾಡಿ, ತನ್ನ ಶೈಕ್ಷಣಿಕ ಸಾಧನೆಗೆ ಕಾರಣದಾದವರಿಗೆ ಮತ್ತು ಸಮಾಜ ಬಾಂಧವರಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ ಮಾತನಾಡಿ, ಸಮಾಜದ ಸಂಘ ಇವತ್ತು ಇಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಿದೆ ಎಂದರೆ ಅದಕ್ಕೆ ನಮ್ಮ ಸಮಾಜದ ಎಲ್ಲ ಮುಖಂಡರ ಸಹಕಾರವೇ ಕಾರಣ ಎಂದ ಅಧ್ಯಕ್ಷರು, ಈ ಹಿಂದಿನ ಅಧ್ಯಕ್ಷರಿಗೆ ನೀಡಿದ ಸಹಾಯ, ಸಹಕಾರ ನನಗೂ ನೀಡುವ ಮೂಲಕ ಸಂಘವನ್ನು ಇನ್ನು ಶಕ್ತಿಯುತವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಬೇಕೆಂದು ಸಮಾಜಬಾಂಧವರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಸಾಧಕರಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಜುನಾಥ ಎಂ ನಾಯ್ಕ, ನಾಟಿ ವೈದ್ಯ ಗಣಪಯ್ಯ ನಾಯ್ಕ, ಭಜನೆಕಾರ ಮಾರುತಿ ನಾಯ್ಕ ಕೂಜಳ್ಳಿ ಮತ್ತು ಕ್ರೀಡಾಪಟು ರಾಘವೇಂದ್ರ ಮಾದೇವ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶಾಸಕ ದಿನಕರ ಶೆಟ್ಟಿ ಅವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೆಗಡೆಯ ದೀಕ್ಷಾ ಪಾಂಡುರAಗ ನಾಯ್ಕ ಸೇರಿದಂತೆ ಶೇ 90ಕ್ಕಿಂತ ಅಧಿಕ ಅಂಕ ಪಡೆದ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಸದಸ್ಯರಾದ ಪಲ್ಲವಿ ಮಡಿವಾಳ, ಸಮಾಜದ ಪ್ರಮುಖರಾದ ಆರ್ ಜಿ ನಾಯ್ಕ, ಸೂರಜ ನಾಯ್ಕ ಸೋನಿ ಸೇರಿದಂತೆ ನಾಮಧಾರಿ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಅರುಣ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಶಿಕ್ಷಕ ಕಿರಣ ನಾಯ್ಕ ವಂದಿಸಿದರು.