ಸಿದ್ದಾಪುರ: ಮನುಷ್ಯನಲ್ಲಿರುವ ದುಷ್ಟಶಕ್ತಿ ದೂರ ಆಗಬೇಕಾದರೆ ಆತನಲ್ಲಿರುವ ದೈವಶಕ್ತಿ ಜಾಗೃತ ಆಗಬೇಕು. ಹಾಗಾದಾಗ ಮಾತ್ರ ನಮ್ಮ ನೆಲದ ಆದ್ಮಾತ್ಮಿಕತೆ ಉಳಿಯುತ್ತದೆ ಎಂದು ಶಿರಸಿ-ಸಿದ್ದಾಪುರ ತಾಲೂಕಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾಜಿ ಹೇಳಿದರು.
ಪಟ್ಟಣದ ಹೊಸೂರಿನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶರನ್ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಚೈತನ್ಯ ಶಿವಶಕ್ತಿಯರ ದರ್ಶನ ಕಾರ್ಯಕ್ರಮದಲ್ಲಿ ಶರನ್ನವರಾತ್ರಿಯ ಕುರಿತು ಅವರು ಮಾತನಾಡಿದರು. ಮಕ್ಕಳಿಗೆ ಆದ್ಯಾತ್ಮಿಕತೆ ಕಲಿಸಬೇಕು. ವ್ಯಕ್ತಿಗಳಲ್ಲಿರುವ ದುಷ್ಠಶಕ್ತಿಗಳನ್ನು ನಿರ್ಮೂಲನೆ ಮಾಡಬೇಕು. ನವದುರ್ಗೆಯರ ವಿಭಿನ್ನ ಸ್ವರೂಪದ ಕುರಿತು ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಹಬ್ಬಗಳಿಗೂ ಅದರದ್ದೇ ಆದ ವಿಶೇಷತೆ ಇದೆ. ಆದರೆ ಇಂದು ಎಲ್ಲ ಹಬ್ಬಗಳು ತನ್ನ ವಿಶೇಷತೆ ಕಳೆದುಕೊಳ್ಳುತ್ತಿದೆ. ಇಂದಿನ ಆಧುನಿಕ ಜೀವನ ಶೈಲಿಯಿಂದ ವಿದೇಶದ ಸಂಸ್ಕೃತಿಯತ್ತ ಸಾಗುತ್ತಿರುವುದು ಕಂಡು ಬರುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯನ್ನು ತಿಳಿಸುಕೊಡುವ ಅಗತ್ಯ ಇದೆ ಎಂದು ಹೇಳಿದರು.
ಬೇಡ್ಕಣಿ ಜನತಾ ವಿದ್ಯಾಲಯದ ಶಿಕ್ಷಕ ಜಿ.ಟಿ.ಭಟ್ಟ ಮಾತನಾಡಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಸಂಪ್ರದಾಯ ಇದೆ. ಸಂಪ್ರದಾಯದ ಮೂಲಕವೇ ಹಬ್ಬವನ್ನು ಆಚರಿಸುವ ರೂಢಿ ಮೊದಲಿನಿಂದಲೂ ಇದೆ ಎಂದು ಹೇಳಿದರು. ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕ ಎನ್.ಪಿ.ಭಟ್ಟ ಉಪಸ್ಥಿತರಿದ್ದರು.
ಮಹಿಳೆಯರಿಂದ ಚೈತನ್ಯ ಶಿವಶಕ್ತಿಯರ ಪ್ರದರ್ಶನ ನಡೆಯಿತು. ಶಶಿ ನಾಯ್ಕ ಸ್ವಾಗತಿಸಿದರು, ಶಂಕರ ಹೆಗಡೆ ವಂದಿಸಿದರು. ಬಿ.ಕೆ.ದೇವಕಿ ನಿರ್ವಹಿಸಿದರು.