ಸಿದ್ದಾಪುರ: ಪಟ್ಟಣದ ಬಂಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕಛೇರಿ ಇವರ ಆಶ್ರಯದಲ್ಲಿ ಹೊಸೂರಿನ 5 ಅಂಗನವಾಡಿ ಕೇಂದ್ರಗಳ ಪೋಷಣಾ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕರಾದ ನೀಲಮ್ಮ ನಾಯ್ಕ ಮಾತನಾಡಿ, ನಾವು ಮಕ್ಕಳಿಗೆ ಉತ್ತಮವಾದ ವಿದ್ಯೆಯನ್ನು ಕೊಡುತ್ತೇವೆ, ಆದರೆ ಅವರ ಆರೋಗ್ಯದ ವಿಷಯದಲ್ಲಿ ಎಲ್ಲೋ ಎಡವಿದ್ದೇವೆ ಎಂದೆನಿಸುತ್ತದೆ. ಉತ್ತಮವಾದ ಮಗು ಸಮಾಜಕ್ಕೆ ಬೇಕೆಂದು ಬಯಸುವುದಾದರೆ ಉತ್ತಮವಾದ ಆರೋಗ್ಯದ ಬಗ್ಗೆಯೂ ಗರ್ಭಿಣಿ ಸ್ತ್ರೀ ತಿಳಿದುಕೊಳ್ಳಬೇಕಾಗುತ್ತದೆ. ಕೇವಲ ಒಂದು ಇಲಾಖೆಯಿಂದ ಮಾತ್ರವೇ ಪೌಷ್ಟಿಕ ಆಹಾರವಾಗಲಿ ಚುಚ್ಚುಮದ್ದು, ಸೂಕ್ತ ಸಲಹೆ ಸೂಚನೆ ಆಗಲಿ ಕೊಡಲು ಸಾಧ್ಯವಿಲ್ಲ. ಈ ಉದ್ದೇಶಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಈ ನಿಟ್ಟಿನಲ್ಲಿ ಕ್ರೋಢೀಕರಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉತ್ತಮವಾದ ಮಗು ಸಮಾಜಕ್ಕೆ ಕುಟುಂಬಕ್ಕೆ ಬರಬೇಕಾದಲ್ಲಿ ಗರ್ಭಾವಸ್ಥೆಯಿಂದಲೇ ಅದನ್ನು ಇಲಾಖೆ, ಕುಟುಂಬದ ಜೊತೆಗೆ ಘೋಷಣೆ ಮಾಡುವಂತದ್ದು ಎಂದರು.
ಈ ವೇಳೆ ನವದಂಪತಿಗಳಿಗೆ, 3 ತಿಂಗಳು ತುಂಬಿದ ಮಗುವಿಗೆ ಸ್ವಾಗತ, 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಶಣ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆ ಸುವರ್ಣ ಐ. ಪ್ರಾರ್ಥಿಸಿದರು. ಫರ್ಜಾನ ಎಂ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಯರಾದ ಮಹಾದೇವಿ ಎಂ., ಸುಜಾತ ಎಸ್., ಮಮತಾ ಎಲ್., ಆಶಾ ಕಾರ್ಯಕರ್ತೆ ಶಶಿಕಲಾ ನಾಯ್ಕ ಸೇರಿದಂತೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು.