ಕಾರವಾರ:ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ ನಿಗದಿಪಡಿಸುವ ಉದ್ದೇಶದಿಂದ ತಾಲೂಕಾ ಮಟ್ಟದಲ್ಲಿ ತರಬೇತಿ ನೀಡಲು ಆಯ್ಕೆಯಾದ ತರಬೇತುದಾರರಿಗೆ ಜಿಲ್ಲಾ ಮಟ್ಟದ ತರಬೇತಿದಾರರ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಮಾತಾನಾಡಿ ಸರಕಾರದ ಅಧಿಸೂಚನೆಯಂತೆ ಗ್ರಾಮ ಪಂಚಾಯತಿಗಳ ಆಸ್ತಿ ಮೌಲ್ಯಮಾಪನ ನಡೆಯಬೇಕಿದ್ದು, ಈ ಹಿಂದಿನ ಬಾಡಿಗೆ ಮೌಲ್ಯದ ಬದಲಾಗಿ ಬಂಡವಾಳ ಮೌಲ್ಯವನ್ನು ಆಧರಿಸಿ ಆಸ್ತಿಗಳ ಮೌಲ್ಯಮಾಪನ ಮಾಡಿ ಆಸ್ತಿ ತೆರಿಗೆಯನ್ನು ನಿಗದಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಪಂ ಮಟ್ಟದಲ್ಲಿ ಕ್ರಿಯಾಶೀಲ ಸ್ವಸಹಾಯ ಗುಂಪಿನ ಸದಸ್ಯರ ಸಹಾಯ ಪಡೆದು ಆಸ್ತಿ ಮೌಲ್ಯಮಾಪನವನ್ನು ಗ್ರಾಪಂ ಮಟ್ಟದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ದಿನ ಜಿಲ್ಲಾ ಮಟ್ಟದಲ್ಲಿ ತಾಲೂಕ ಮಟ್ಟದ ತರಬೇತುದಾರರಿಗೆ(ಪಿಡಿಒ, ಬಿಲಕಲೆಕ್ಟರ್, ಎನ್‌ಆರ್‌ಎಲ್‌ಎಂ ಸಿಬ್ಬಂದಿ) ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಕಾರ್ಯಗಾರದಲ್ಲಿ ಪಾಲ್ಗೊಂಡ ಎಲ್ಲಾ ತರಬೇತಿದಾರರು ಸರಿಯಾಗಿ ತರಬೇತಿ ಪಡೆದು ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಈ ಕಾರ್ಯಗಾರದಲ್ಲಿ ನಿವಾರಿಸಿಕೊಳ್ಳಬೇಕು. ಜೊತೆಗೆ ತಾಲೂಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಸ್ವಸಹಾಯ ಸಂಘದ ಸದಸ್ಯರಿಗೆ ಕೂಡಲೇ ತರಬೇತಿ ಆಯೋಜಿಸಿ ಅಗಸ್ಟ್ ತಿಂಗಳೊಳಗಾಗಿ ತರಬೇತಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನಂತರದಲ್ಲಿ ಜಿಲ್ಲಾ ತರಬೇತಿದಾರರಾದ ಅಂಕೋಲಾ, ಜೊಯಿಡಾ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ವೈ. ಸಾವಂತ, ಆನಂದ ಬಡಕುಂದ್ರಿ, ನರೇಗಾ ಸಹಾಯಕ ನಿರ್ದೇಶಕರಾದ ಸುನಿಲ್ ಬಾಡಿಗೆ ಮೌಲ್ಯದ ಬದಲಾಗಿ ಬಂಡವಾಳ ಮೌಲ್ಯವನ್ನ ಆಧರಿಸಿ ಆಸ್ತಿಗಳ ಮೌಲಮಾಪನ ಮಾಡಿ ಆಸ್ತಿ ತೆರಿಗೆಯನ್ನು ನಿಗದಿಗೊಳಿಸುವ ಕುರಿತು ತಾಲೂಕ ಮಟ್ಟದ ತರಬೇತಿದಾರರಿಗೆ ಪಿಪಿಟಿ ಮೂಲಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ದಿಲೀಪ್ ಜಕ್ಕಪ್ಪಗೋಳ್, ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್ ಹಾಗೂ ಎಲ್ಲ ತಾಲೂಕುಗಳಿಂದ ಆಗಮಿಸಿದ ತಾಲೂಕು ಮಟ್ಟದ ತರಬೇತಿದಾರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.