ಕುಮಟಾ: ಪಟ್ಟಣದ ಚಿತ್ರಗಿ ಕಡೇಭಾಗದಲ್ಲಿ ಸ್ಥಾಪಿಸಲಾದ ಘನತ್ಯಾಜ್ಯ ಸಂಗ್ರಹ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರು ಪುರಸಭೆಯನ್ನು ಒತ್ತಾಯಿಸಿದ್ದಾರೆ.
ಪುರಸಭೆಯ ವಾರ್ಡ್ ನಂಬರ್ 6ರ ಚಿತ್ರಗಿ ಕಡೇಭಾಗದಲ್ಲಿ ಘನತ್ಯಾಜ್ಯ ಸಂಗ್ರಹ ಘಟಕವನ್ನು ಸ್ಥಾಪಿಸಿದ್ದು, ಇಡೀ ಕುಮಟಾ ಪಟ್ಟಣದ ಕಸವನ್ನು ಇಲ್ಲಿ ಸಂಗ್ರಹಿಸಿಡಲಾಗುತ್ತಿದೆ. ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣ ಆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ಕ್ರಿಮಿಕೀಟಗಳ ಕಾಟದ ಜೊತೆಗೆ ದುರ್ವಾಸನೆಗೆ ಕಾರಣವಾಗಿದೆ. ಆ ಭಾಗದ ಆರೋಗ್ಯಕರ ವಾತಾವರಣದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಜಾನುವಾರುಗಳು ಪ್ಲಾಸ್ಟಿಕ್ ಸೇವಿಸಿ, ಹೊಟ್ಟೆ ಉಬ್ಬಿ ಸಾವಿಗೀಡಾಗುತ್ತಿವೆ. ಈ ಘಟಕದ ಸಮೀಪದಲ್ಲೆ ಸ್ಥಳೀಯರ ಬಾವಿ, ಪ್ರಾಥಮಿಕ ಶಾಲೆ ಇದೆ. ಇಂಥ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹ ಘಟಕ ಸ್ಥಾಪಿಸಿ, ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವಂತಾಗಿದೆ. ಹಾಗಾಗಿ ಇಲ್ಲಿನ ಆರೋಗ್ಯಕರ ವಾತಾವರಣವನ್ನು ಹಾಳುಗೆಡುವ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸ್ಥಳೀಯರೆಲ್ಲ ಸೇರಿ ಕುಮಟಾ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಅವರಿಗೆ ಭೇಟಿ ಮಾಡಿ, ಮನವಿ ಸಲ್ಲಿಸಲಾಗಿದೆ.
ನಾಲ್ಕು ದಿನಗಳಲ್ಲಿ ಘಟಕದಲ್ಲಿರುವ ಕಸವನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ ಎಂದು ಭರವಸೆ ನೀಡಿದ ಪುರಸಭೆ ಅಧಿಕಾರಿಗಳು, ಮೂರು ತಿಂಗಳಾದರೂ ನಮ್ಮ ಮನವಿಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ. ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸ್ಥಳೀಯರಾದ ಪ್ರೇಮ ಪಟಗಾರ, ಸಾವಿತ್ರಿ ಪಟಗಾರ, ವನಿತಾ ಆಚಾರಿ, ಸದಾನಂದ ಪಟಗಾರ, ಬೇಬಿ ಗೌಡ, ರೂಪಾ ನಾಯಕ ಇತರರು ಒತ್ತಾಯಿಸಿದ್ದಾರೆ.