ಜೊಯಿಡಾ: ಜೊಯಿಡಾ ಗ್ರಾ.ಪಂ. ವ್ಯಾಪ್ತಿಯ ಗೋಡೆಗಾಳಿ ರಸ್ತೆ ಸಂಪೂರ್ಣವಾಗಿ ಕೆಸರಿನಿಂದ ಕೂಡಿದೆ.ಶಾಲಾ ಮಕ್ಕಳು, ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದಾರೆ.
ರಸ್ತೆಯ ಕಳಪೆ ಕಾಮಗಾರಿ ಕುರಿತು ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ. ಪಂಚಾಯತ್ ರಾಜ್ ಇಲಾಖೆಯಿಂದ 2021ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಅನುದಾನದಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ರಸ್ತೆಗೆ ಜಲ್ಲಿಕಲ್ಲು ಹಾಸಲಾಗಿತ್ತು. ಕಾಮಗಾರಿ ನಡೆಯುವ ಸಂದರ್ಭದಲ್ಲೇ ಸ್ಥಳೀಯರು, ಕಾಮಗಾರಿ ಕಳಪೆಯಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಕಾಮಗಾರಿ ಮುಗಿದು ಎರಡು ತಿಂಗಳು ಆಗುವ ಮೊದಲೇ ನಡೆದುಕೊಂಡು ಹೋಗಲೂ ಸಾಧ್ಯವಿಲ್ಲದ ಹಾಗಾಗಿದೆ. ಇಲ್ಲಿಂದ ಇಬ್ಬರು ಅಂಗವಿಕಲ ಮಕ್ಕಳೂ ಜೊಯಿಡಾ ಶಾಲೆಗೆ ಬರುತ್ತಾರೆ. ರಾಡಿ ತುಂಬಿದ, ಕೆಸರು ಗದ್ದೆಯಂತಾದ ರಸ್ತೆಯಲ್ಲಿ ದಿನನಿತ್ಯ ಹೇಗೆ ಬರುವುದು ಎಂಬುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ. ‘ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ರಸ್ತೆ 600 ಮೀಟರ್ ಮಾತ್ರ ಇದೆ. 10 ಲಕ್ಷ ಅನುದಾನದಲ್ಲಿ ಕೇವಲ 6 ಲಕ್ಷವನ್ನು ರಸ್ತೆಗೆ ಬಳಸಲಾಗಿದೆ. ಉಳಿದ 4 ಲಕ್ಷದಲ್ಲಿ ತಡೆಗೋಡೆ ನಿರ್ಮಿಸಿದ್ದಾರೆ. ರಸ್ತೆಗೆ ಜಲ್ಲಿ ಕಲ್ಲನ್ನು ಕೂಡಾ ಸರಿಯಾಗಿ ಹಾಕಿಲ್ಲ. ರೋಲರ್ ಓಡಿಸಿ ಸಮತಟ್ಟು ಮಾಡಲಿಲ್ಲ. ಸ್ವಲ್ಪ ಖಡಿ ಹಾಕಿದಂತೆ ಮಾಡಿ ಮೇಲಿಂದ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಈಗ ರಸ್ತೆಯ ಸ್ಥಿತಿ ಹೀಗಾಗಿದೆ’ ಎಂಬುದು ಸ್ಥಳೀಯರ ಆರೋಪವಾಗಿದೆ.
ನಮ್ಮ ರಸ್ತೆಯನ್ನು ಕೂಡಲೇ ಸರಿಪಡಿಸಿ ಕೊಡಬೇಕು ಮತ್ತು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಗಮನ ಹರಿಸುತ್ತಿಲ್ಲ: ‘ಕಾಮಗಾರಿಯು ಕಳಪೆಯಾಗಿರುವ ಬಗ್ಗೆ ಆಗಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮೂರು ಬಾರಿ ಗಮನಕ್ಕೆ ತಂದಿದ್ದೆವು. ಆಗ ಅಧಿಕಾರಿಗಳು, ನಾವೇ ಗುತ್ತಿಗೆದಾರರಿಗೆ ಬಿಲ್ ಮಾಡುವುದು. ಕಾಮಗಾರಿ ಸರಿಯಾಗಿಲ್ಲ ಎಂದರೆ ನಾವು ಮಾಡಿಕೊಡುತ್ತೇವೆ ಎಂದಿದ್ದರು. ಈಗ ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯ ತುಳಸಿದಾಸ್ ವೇಳಿಪ್ ದೂರುತ್ತಾರೆ.
ದುರಸ್ತಿ ಮಾಡಲಾಗುವುದು:‘ ಗುತ್ತಿಗೆದಾರರು ಖಡೀಕರಣದ ನಂತರ ಅಧಿಕ ಪ್ರಮಾಣದಲ್ಲಿ ಮಣ್ಣನ್ನು ರಸ್ತೆಗೆ ಹಾಕಿದ್ದಾರೆ. ಇದರಿಂದ ರಸ್ತೆಯಲ್ಲಿ ಕೆಸರಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆ ದುರಸ್ತಿ ಪಡಿಸುತ್ತೇವೆ’ ಎಂದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮುಹಮ್ಮದ್ ಇಜಾನ್ ಸಬೂ ಪ್ರತಿಕ್ರಿಯಿಸಿದ್ದಾರೆ.