ಕರೋನಾ ಚಿಕಿತ್ಸೆಗೆ ತಮ್ಮ ಆಸ್ಪತ್ರೆ ಮುಡಿಪಾಗಿಟ್ಟ ಜಿಲ್ಲೆಯ ವೈದ್ಯ ಡಾ. ಕೀರ್ತಿ ನಾಯ್ಕ

ಕಾರವಾರ: ಕೊರೊನಾ ವೈರಸ್ ವಿರುದ್ಧ ಸೆಣಸಾಡಲು ದೇಶವೇ ಒಗ್ಗಟ್ಟಾಗಿ ನಿಂತಿದ್ದರೆ, ವೈದ್ಯರ ಪಡೆ ಯೋಧರಾಗಿ ನಿಂತಿದೆ. ಕಾರವಾರದಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಡಾ.ಕೀರ್ತಿ ನಾಯ್ಕ ಈ ಹೋರಾಟಕ್ಕೆ ತಮ್ಮ ಆಸ್ಪತ್ರೆಯನ್ನು ಮುಡಿಪಾಗಿಡಲು ಮುಂದಾಗುವ ಮೂಲಕ ಮಾದರಿಯಾಗಿದ್ದಾರೆ.
ನಗರದ ಕಾಜುಬಾಗದಲ್ಲಿ ನಾಗಮಂಗಲ ಹೃದಯಾಲಯ ಹೆಸರಿನ ಆಸ್ಪತ್ರೆ ನಡೆಸುತ್ತಿರುವ ಹೃದ್ರೋಗ ತಜ್ಞ ಡಾ.ಕೀರ್ತಿ ನಾಯ್ಕ ಕೊರೊನಾ ತೊಲಗಿಸುವ ಸಮರಕ್ಕೆ ಯೋಧರಾಗಿ ನಿಲ್ಲಲು ನಿರ್ಧರಿಸಿದ್ದಾರೆ. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅಗತ್ಯಬಿದ್ದರೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲು ಅವಕಾಶ ನೀಡುತ್ತೇನೆ. ಆಸ್ಪತ್ರೆಯ ನೆಲಮಹಡಿಯಲ್ಲಿ 5 ಹಾಸಿಗೆಯ ತುರ್ತು ನಿಗಾ ಘಟಕ (ಐಸಿಯು) ಮತ್ತು 2 ವೆಂಟಿಲೇಟರ್ ವ್ಯವಸ್ಥೆ ಇದೆ. ಇದಲ್ಲದೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ತಾನೂ ಸಿದ್ಧನಿದ್ದೇನೆ. ಆಸ್ಪತ್ರೆಯ ಸಿಬ್ಬಂದಿಗಳು ಸೇವೆಗೆ ಸಿದ್ಧರಾಗಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದೇನೆ ಎಂದು ಡಾ.ಕೀರ್ತಿ ತಿಳಿಸಿದರು.

 

ಕೊರೊನಾ ವಿಚಾರವಾಗಿ ಸರ್ಕಾರ ಸೂಚಿಸಿದ ಪ್ರೊಟೊಕಾಲ್ ಪಾಲಿಸಿಯೇ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದೂ ಸ್ಪಷ್ಟಪಡಿಸಿದರು.
ವೈದ್ಯ ವೃತ್ತಿ ಕೇವಲ ಹಣಗಳಿಕೆಯ ವೃತ್ತಿಯಲ್ಲ. ಇದು ಜನರ ಸೇವೆಗೆ ಇರುವ ಅವಕಾಶ. ಅದರಲ್ಲೂ ಕೊರೊನಾದಂತಹ ಮಹಾಮಾರಿ ರೋಗವನ್ನು ನಿಯಂತ್ರಿಸಲು ದೇಶಾದ್ಯಂತ ಸಹಸ್ರಾರು ವೈದ್ಯರು ಪ್ರಾಣ ಪಣಕ್ಕಿಟ್ಟು ಸೇವೆಗೈಯ್ಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಓರ್ವ ವೈದ್ಯನಾಗಿ ನನಗೂ ಚಿಕಿತ್ಸೆಗೆ ಅವಕಾಶ ಸಿಕ್ಕರೆ ಹಿಂದಡಿ ಇಡದೆ ರೋಗಿಗೆ ಚಿಕಿತ್ಸೆ ನೀಡುತ್ತೇನೆ. ಇದು ದೆಶಕ್ಕಾಗಿ ಸೇವೆಗೈಯ್ಯುವ ಸಮಯ. ಯೋಧರು ದೇಶ ಕಾಯ್ದಂತೆ, ನಮಗೂ ದೇಶ ರಕ್ಷಿಸುವ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಈ ಸೇವೆಗೆ ಮುಂದಾಗುತ್ತಿದ್ದೇನೆ ಎಂದು ಅವರು ಹೇಳಿದರು.
ಕೊರೊನಾ ಚಿಕಿತ್ಸೆ ನೀಡಲು ಸಿದ್ಧರಾಗಿರುವ ಜೊತೆಗೆ, ತಮ್ಮ ಆಸ್ಪತ್ರೆಯ ಐಸಿಯು ಕೊಠಡಿ ಮತ್ತು ವೆಂಟಿಲೇಟರ್ ವ್ಯವಸ್ಥೆಗಳನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಡಿಪಾಗಿಡುವ ಬಗ್ಗೆ ಡಾ.ಕೀರ್ತಿ ಮಾ.28 ರಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ಆಸ್ಪತ್ರೆಯಲ್ಲಿರುವ ಸುಸಜ್ಜಿತ ವ್ಯವಸ್ಥೆಗಳ ಚಿತ್ರಗಳ ಜೊತೆಗೆ ತಮ್ಮ ಖಾಸಗಿ ದೂರವಾಣಿ ಸಂಖ್ಯೆಯನ್ನೂ ನಮೂದಿಸಿ ರೋಗಿಗಳ ಸೇವೆಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಸಿದ್ಧರಾಗಿರುವುದಾಗಿ ಅವರು ತಿಳಿಸಿದ್ದರು.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ವೈದ್ಯರೋರ್ವರು ಸ್ವಇಚ್ಛೆಯಿಂದ ಮುಂದೆಬಂದಿರುವದು ಸಂತೋಷದ ಮತ್ತು ಹೆಮ್ಮೆಯ ಸಂಗತಿ. ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ ಸರ್ಕಾರ ಕೆಲವೊಂದು ನಿಯಮಾವಳಿ ರೂಪಿಸಿದ್ದು ಅವುಗಳನ್ನು ಪಾಲಿಸಬೇಕಾಗುತ್ತದೆ. ಖಾಸಗಿ ಆಸ್ಪತ್ರೆ ಮುಂದಾಗಿದ್ದರೆ ಅದನ್ನು ಮೊದಲು ಕೊರೊನಾ ಕ್ಲಿನಿಕ್ ಎಂದು ಘೋಷಿಸುತ್ತೇವೆ. ಮೊದಲು ರೋಗಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕಾಗುತ್ತದೆ. ಸರ್ಕಾರಿ ಸೌಲಭ್ಯ ಮೀರಿ ಚಿಕಿತ್ಸೆಗೆ ಅಗತ್ಯವಿದ್ದರೆ ಕೊರೊನಾ ಕ್ಲಿನಿಕ್‍ಗೆ ದಾಖಲಿಸುತ್ತೇವೆ. ಉತ್ತಮ ನಿರ್ಧಾರಕೈಗೊಂಡಿರುವ ಡಾ.ಕೀರ್ತಿಯವರಿಗೆ ನನ್ನ ಅಭಿನಂದನೆಯನ್ನೂ ತಿಳಿಸುತ್ತೇನೆ.
-ಎಂ.ರೋಶನ್, ಜಿ.ಪಂ. ಸಿಇಓ
ಕೊರೊನಾ ವಿರುದ್ಧದ ಹೋರಾಟಕ್ಕೆ ನಾನು ಸಿದ್ಧನಾಗಿದ್ದು ಅಗತ್ಯವಿದ್ದರೆ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಜೊತೆಗೆ ನಮ್ಮ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಿದ್ದೇನೆ. ಆಸ್ಪತ್ರೆಯ ಸಿಬ್ಬಂದಿಗಳು ಕೂಡ ಸೇವೆಗೆ ಒಪ್ಪಿದ್ದಾರೆ. ದೇಶದಿಂದ ಮಹಾಮಾರಿ ತೊಲಗಿಸುವ ಯುದ್ಧದಲ್ಲಿ ಮುಂದೆನಿಂತು ಹೋರಾಡುವ ಯೋಧನಾಗುವ ಇಚ್ಛೆ ನನ್ನದು.
– ಡಾ.ಕೀರ್ತಿ ನಾಯ್ಕ, ಹೃದ್ರೋಗ ತಜ್ಞರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.