ಸಂಸ್ಕಾರಯುತ ವ್ಯಕ್ತಿತ್ವಕ್ಕೆ ಸಂಗೀತ ಸಹಕಾರಿ: ಪಂ.ಹಾಸಣಗಿ

ಶಿರಸಿ: ಜಪತಪ-ಹೋಮಹವನಾದಿಗಳಿಂದ ನಾವು ಭಗವಂತನನ್ನು ಆರಾಧಿಸುತ್ತೇವೆ. ಆದರೆ ಶಾಸ್ತ್ರೀಯ ಬದ್ಧ ಸಂಗೀತದ ಮೂಲಕ ಆರಾಧಿಸುವುದು, ಭಗವಂತನನ್ನು ನೆನೆಯುವುದು ಎಲ್ಲವುದಕ್ಕಿಂತ ಶ್ರೇಷ್ಠವಾಗಿದೆ. ಇದನ್ನು ಋಷಿಮುನಿಗಳು ಕೂಡಾ ಈ ಹಿಂದೆಯೆ ಹೇಳಿರುವ ಕುರುಹುಗಳು ಕೂಡಾ ಇದೆ ಎಂದು ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ ಗಣಪತಿ ಭಟ್ಟ ಹಾಸಣಗಿ ಹೇಳಿದರು.

ಶಿರಸಿ ನಗರದ ಟಿಎಂಎಸ್ ಸಭಾ ಭವನದಲ್ಲಿ ಕಳೆದ ಮೂರು ದಿನಗಳಿಂದ ನಡೆದ ‘ಸುರಸಾಧೆ’ ಜನನಿ ಸಂಗೀತೋತ್ಸವ 2020 ರ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಕ್ತಿ ಭಜನೆ ಮೂಲಕ ಭಗವಂತನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಂಗೀತದಲ್ಲಿ ಅಡಗಿಕೊಂಡಿದೆ. ಅದರಿಂದ ಸಂಸ್ಕಾರಯುತ ವ್ಯಕ್ತಿತ್ವ ಬೆಳೆಯುತ್ತದೆ ಜೊತೆಜೊತೆಗೆ ಮನಸ್ಸಿನ ಏಕಾಗ್ರತೆಯ ಭಾವನೆ ಹಾಗೂ ಸಾಧನೆಗೆ ಅವಕಾಶವಾಗುತ್ತದೆ. ಪ್ರಾಜ್ಞರು ಹೇಳಿರುವಂತೆ ಮನಸ್ಥಿತಿ ಹಾಗೂ ಅದೆಷ್ಟೋ ರೋಗ ಪರಿಹಾರ ಮಾಡುವ ಅಗಾಧ ಶಕ್ತಿ ಸಂಗೀತಕ್ಕಿದೆ ಎಂದರು. ಪಾಶ್ಚಿಮಾತ್ಯ ಸಂಸ್ಕೃತಿಗಿಂತ ನಮ್ಮ ಸಂಸ್ಕಾರಯುತವಾದ ಕಲೆ, ಹಾಗೂ ಕಲಾ ಪ್ರಕಾರಗಳನ್ನು ಚಿಕ್ಕ ಮಕ್ಕಳಿಗೆ ಮಾರ್ಗದರ್ಶಿಸಿ ಅವರಲ್ಲಿಯ ಪ್ರತಿಭೆ ಮೂಲಕ ಜೀವನದ ಸಾಧನೆಯ ಗುರಿಯನ್ನು ಅವರಲ್ಲಿ ಅರುಹಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಿರಸಿ ಟಿ.ಎಸ್.ಎಸ್ ನ ನಿರ್ದೇಶಕ ಹಾಗೂ ನ್ಯಾಯವಾದಿ ಶಶಾಂಕ ಹೆಗಡೆ ಶೀಗೆಹಳ್ಳಿ ಮಾತನಾಡಿ ಶಾಲಾ ಪಠ್ಯಕ್ರಮದ ಆಟಪಾಠಗಳೊಂದಿಗೆ ಶಾಸ್ತ್ರೀಯ ಬದ್ಧ ಸಂಗೀತ ಹೇಳಿ ಕೊಡುವ ಹಾಗೂ ತನ್ಮೂಲಕ ಯುವ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿಕೊಡುವ ಸಂಘಟನೆ ಶ್ಲಾಘನೀಯವಾಗಿದೆ ಎಂದರು. ಇನ್ನೊಬ್ಬ ಅತಿಥಿ ಅಡಿಕೆ ವರ್ತಕರ ಸಂಗದ ಮುಖ್ಯಸ್ಥರಲ್ಲೊಬ್ಬರಾದ ಲಯನ್ ಲೋಕೇಶ ಹೆಗಡೆ ಪ್ರಗತಿಯವರು ಮಾತನಾಡಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಮೂಲಕ ಸಮಾಜದಲ್ಲಿ ಒಳ್ಳೆ ಬೆಳವಣಿಗೆ ಮಾಡುತ್ತಿರುವ ಜನನಿ ಮ್ಯೂಸಿಕ್ ಸಂಸ್ಥೆಯ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

ಸಭಾಧ್ಯಕ್ಯಕ್ಷತೆ ವಹಿಸಿದ್ದ ಶಿರಸಿ ದೀಶಾಗ್ರೂಪ್ ನ ಮುಖ್ಯಸ್ಥರಾದ ದೀಪಕ ಹೆಗಡೆ ದೊಡ್ಡೂರ್ ಮಾತನಾಡಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ವೇದಿಕೆಯೊದಗಿಸಿಕೊಟ್ಟು ತನ್ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರನ್ನು ಕರೆಸಿ ಅವರಿಂದ ಗಾನ- ವಾದನಗಳನ್ನು ನಡೆಸುವ ಪ್ರಕ್ರಿಯೆ ಒಳ್ಳೆಯ ಸಂಘಟನೆಯಾಗಿದ್ದು, ಇದರಿಂದ ಸಮಾಜದ ಜನರಿಗೆ, ಮಕ್ಕಳಿಗೆ ಸಂಗೀತ ರಸದೌತಣ ನೀಡಿದಂತಾಗುತ್ತಿದೆ ಹಾಗೂ ಸಾಧಕರ ಮಹತ್ವವನ್ನು ತಿಳಿಸಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪಂ.ಗಣಪತಿ ಭಟ್ಟ ಹಾಸಣಗಿಯವರಿಗೆ ಗುರು- ಗೌರವಾರ್ಪಣೆಯನ್ನು ನೆರವೇರಿಸಲಾಯಿತು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಜನನಿ ಸಂಗೀತ ಶಾಲೆಯ ಹಿರಿಯಕಿರಿಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.

ಸಂಗೀತೋತ್ಸವದ ಕೊನೆಯ ಹಂತವಾಗಿ ಪಂ.ಗಣಪತಿ ಭಟ್ಟ ಹಾಸಣಗಿಯವರು ತಮ್ಮ ಸಂಗೀತ ಕಛೇರಿಯನ್ನು ಸರಿಸುಮಾರು ಎರಡು ತಾಸುಗಳಿಗೂ ಮಿಕ್ಕಿ ನಡೆಸಿಕೊಡುತ್ತ, ಆರಂಭದಲ್ಲಿ ರಾಗ್‍ಜೋಗ್ ನ್ನು ವಿಸ್ತಾರವಾಗಿ ಹಾಡಿದರೆ, ತದನಂತರದಲ್ಲಿ ಅಪೇಕ್ಷಿತ ಅರ್ಥಪೂರ್ಣ ಸಾಹಿತ್ಯದ ಭಜನ್, ಭಕ್ತಿಗೀತೆ ಹಾಗೂ ಕೊನೆಯಲ್ಲಿ ರಾಗ್ ಭೈರವಿಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು. ಇದೇ ಸಂದರ್ಭದಲ್ಲಿ ತಬಲಾದಲ್ಲಿ ಹೊನ್ನಾವರದ ಗೋಪಾಲಕೃಷ್ಣ ಹೆಗಡೆ ಕಲಭಾಗ್ ಹಾಗೂ ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ್ ಹಾಗೂ ಹಿನ್ನೆಲೆ ಸಹಗಾಯನ ಮತ್ತು ತಂಬುರಾದಲ್ಲಿ ವಿನಾಯಕ ಹೆಗಡೆ ಹಿರೇಹದ್ದ ಮತ್ತು ಸಂಪದಾ ಸತೀಶರವರು ಸಾಥ್ ನೀಡಿದರು.

ಜನನಿ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ದಿನೇಶ ಹೆಗಡೆ ಸ್ವಾಗತಿಸಿದರೆ, ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Categories: ಜಿಲ್ಲಾ ಸುದ್ದಿ

1 Comment

Leave A Reply

Your email address will not be published.