ಜ.19ಕ್ಕೆ ‘ಚಂದಿರನ ಮಗಳು’ ಚಲನಚಿತ್ರ ಕಲಾವಿದರಿಗಾಗಿ ಆಡಿಶನ್; ನಿರ್ಮಾಪಕ ಮಂಜುನಾಥ ನಾಯ್ಕ

ಕುಮಟಾ: ನಾಯ್ಕ್ಸ್ ಪ್ರೊಡಕ್ಷನ್ ವತಿಯಿಂದ ಉತ್ತರಕನ್ನಡ ಜಿಲ್ಲೆಯ 80 ದಶಕದ ಹಿಂದಿನ ಹಾಲಕ್ಕಿ ಸಮುದಾಯದ ಹಳ್ಳಿಗಾಡಿನ ಸೊಬಗು ಮತ್ತು ಜನಜೀವನ ತೆರೆದಿಡುವ ‘ಚಂದಿರನ ಮಗಳು’ ಎಂಬ ಚಲನಚಿತ್ರವನ್ನು ನಿರ್ಮಿಸಲಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಚಲನಚಿತ್ರ ನಿರ್ಮಾಪಕ ಮಂಜುನಾಥ ನಾಯ್ಕ ಮಿರ್ಜಾನ ತಿಳಿಸಿದರು.

ಗುರುವಾರ ಪಟ್ಟಣದ ಖಾಸಗಿ ಹೊಟೆಲ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಬಹಳ ಹಿಂದಿನ ಕಾಲದಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಮತ್ತು ಹಾಲಕ್ಕಿ ಸಮುದಾಯದ ಕಲೆ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಈ ಚಲನಚಿತ್ರವು ಒಳಗೊಂಡಿರುತ್ತದೆ. ಹಿರಿಯ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೂ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕಲ್ಪಿಸಲಾಗಿದೆ. ಈ ಚಿತ್ರಕ್ಕೆ 10 ವರ್ಷದಿಂದ 60 ವರ್ಷದವರೆಗಿನ ಕಲಾವಿದರ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ ಜ.19 ರಂದು ಪಟ್ಟಣದ ಸುವರ್ಣಕಾರರ ಕೋ ಆಪ್ ಬ್ಯಾಂಕಿನ ಸಭಾಂಗಣದಲ್ಲಿ ಆಡಿಶನ್ ನಡೆಸಲಿದ್ದೇವೆ. ಜಿಲ್ಲೆಯ ಆಸಕ್ತ ಕಲಾವಿದರು ಭಾಗವಹಿಸಬಹುದಾಗಿದೆ ಎಂದರು.

ಕುಮಟಾ ತಾಲೂಕಿನ ಸಾಂತಗಲ್, ಹಳಕಾರ, ಮಿರ್ಜಾನ್, ನಾಗೂರು ಸೇರಿದಂತೆ ದಾಂಡೇಲಿಯ ಹಳ್ಳಿಯೊಂದರಲ್ಲಿ ಮತ್ತು ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಸಾಹಿತಿ ನಾಡುಮಾಸ್ಕೇರಿಯ ಎಂ.ಕೆ.ನಾಯ್ಕ ರಚಿಸಿರುವ ಒಂದು ಹಾಡು ಹಾಗೂ ನೀನಾಸಂ ಕಲಾವಿದ ಮತ್ಯುಂಜಯ ಹಿರೇಮಠ ರಚಿಸಿರುವ 4 ಹಾಡು ಈ ಚಿತ್ರದಲ್ಲಿದೆ. ದೇವಕಿ ನಾಯ್ಕ ಮತ್ತು ರೇಖಾ ಗುಂದ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರಿನ ಕನಕಲಕ್ಷ್ಮೀ ಮುಖ್ಯ ನಟಿಯಾಗಿ ಹಾಗೂ ಮಂಜುನಾಥ ನಾಯ್ಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ಹಾಲಕ್ಕಿ ಸಮುದಯದ ಓರ್ವ ಮುಖ್ಯ ನಟ ಹಾಗೂ ನಟಿಯೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ಹಾಲಕ್ಕಿ ಸಮುದಾಯವನ್ನು ಕೇಂದ್ರೀಕರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದ ಅವರು, ಆಡಿಶನ್‍ನಲ್ಲಿ ಭಾಗವಹಿಸಿರುವವರು ಹೆಚ್ಚಿನ ಮಾಹಿತಿಗಾಗಿ ಜಯಾ ಶೇಟ್(9740087731) ಹಾಗೂ ರವಿ ಶೇಟ್(9448525958) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಯಾ ಶೇಟ್, ರವಿ ಶೇಟ್ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.