ಕರ್ಕಿಯಲ್ಲಿ ಅದ್ದೂರಿಯಾಗಿ ನಡೆದ ಅಭಿನಂದನೆ- ಸನ್ಮಾನ ಕಾರ್ಯಕ್ರಮ; ಮನರಂಜಿಸಿದ ಸಂಗೀತ

ಹೊನ್ನಾವರ: ತಾಲೂಕಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ.) ಇವರ ಆಶ್ರಯದಲ್ಲಿ ಅಭಿನಂದನೆ, ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮವು ಕಲಾಶ್ರೀ ಸಭಾಭವನ ಕರ್ಕಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವೇ| ಮೂ| ಸುಬ್ರಹ್ಮಣ್ಯ ಭಟ್ಟ ಮಾತನಾಡಿ ಪ್ರಾಮಾಣಿಕರಾಗಿ ನಿಷ್ಕಳಂಕರಾದ ಆರ್. ಜಿ. ಭಟ್ಟ ಡಿ.ಎಫ್.ಓ. ಹಾಗೂ ಆರ್. ಜಿ. ಭಟ್ಟ ಇಂಜಿನೀಯರ್, ಕುಮಟಾ ಇವರ ಸೇವಾ ನಿವೃತ್ತಿಯ ವೃತ್ತಿ ಪರತೆಯನ್ನು ಶ್ಲಾಘಿಸಿ ಇವರ ಪಕ್ವವಾದ ಅನುಭವವನ್ನು ಸಮಾಜ ಉಪಯೋಗಿಸಿಕೊಂಡು ಇನ್ನೂ ಹೆಚ್ಚಿನ ಸಮಾಜ ಸೇವೆ ಅವರಿಂದ ಸಿಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಡಾ| ಜಿ.ಜಿ. ಸಭಾಹಿತರವರು ಮಾತನಾಡಿ, ಸನ್ಮಾನಿತರು ಈವರೆಗೆ ನಿಭಾಯಿಸಿದ ಕಷ್ಟದ ಸಂದರ್ಭವನ್ನು ವಿವರಿಸಿ ಅವರ ಅರ್ಥಪೂರ್ಣ ಸೇವೆಯನ್ನು, ಅವರಿಗೆ ನೀಡಿದ ಅಭಿನಂದನೆಯನ್ನು ಶ್ಲಾಷಿಸಿ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ಶಂಭು ಭಟ್ಟ ಮಾತನಾಡಿ ರಾಗಶ್ರೀ ಸಂಸ್ಥೆ ಎಷ್ಟೋ ಸಾಮಾಜಿಕ ಮೌಲ್ಯದ ಕಾರ್ಯಗಳನ್ನು ಉಪಯುಕ್ತ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇವರುಗಳಿಗೆ ಅಭಿನಂದನೆ ಮಾಡುತ್ತಿರುವುದು, ಸ್ತುತ್ಯಾರ್ಹ ಎಂದರು.

ಶ್ರೀಕಾಂತ ಭಟ್ಟ, ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ ಇವರು ಅಭಿನಂದನಾ ನುಡಿಗಳನ್ನು ಆಡಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ರಾಗಶ್ರೀಯ ಭಾಗ್ಯಲಕ್ಷೀ ಎಸ್. ಭಟ್ಟ ಅವರಿಂದ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಗೀತಾ ಭಟ್ಟ, ಶಿರಸಿ ಸಂವಾದಿನಿಯಲ್ಲಿ ಹಾಗೂ ಯೋಗಾನಂದ ತಬಲಾ ಸಾಥ್ ನೀಡಿದರು. ವಿದ್ವಾನ ಗುರುದತ್ತ ಎ.ಕೆ. ಕಲ್ಕತ್ತ ಅವರ ಸಂಗೀತ ಕಾರ್ಯಕ್ರಮ ನೆರೆದ ಅಪಾರ ಜನರನ್ನು ಮಂತ್ರ ಮುಗ್ದಗೊಳಿಸಿತು. ರಾಗ ಯಮನ್ ಹಾಗೂ ಹಾಡಿದ ಭಜನೆಗಳು ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು. ಇವರಿಗೆ ಪಂಡಿತ್ ಗೋಪಾಲ ಕೃಷ್ಣ ಹೆಗಡೆ ಕಲ್ಬಾಗ್ ಹಾಗೂ ವಿದ್ವಾನ್ ಪ್ರಕಾಶ ಹೆಗಡೆ ಶಿರಸಿ ಉತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿದರು. ಕಲಾಶ್ರೀಯ ಎಂ. ಟಿ. ಭಟ್ಟ, ಪ್ರಾ. ಎಸ್. ಜಿ. ಭಟ್ಟ, ಪ್ರಾ. ಡಿ.ಎನ್. ಭಟ್ಟ, ಸುಬ್ರಾಯ ಭಾಗ್ವತ, ಕಪ್ಪೆಕೆರೆ ಹಾಗೂ ಇತರ ಗಣ್ಯರು, ಕಲಾವಿದರನ್ನು ಗೌರವಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.