ಸುವಿಚಾರ

ಪುರಾಣಾಂತೇ ಶ್ಮಶಾನಾಂತೇ ಮೈಥುನಾಂತೇ ಚ ಯಾ ಮತಿಃ
ಸಾ ಮತಿಃ ಸರ್ವದಾ ಚೇತ್ಸ್ಯಾತ್ ಕೋ ನ ಮುಚ್ಯೇತ ಬಂಧನಾತ್ ||

ಪುರಾಣಗಳನ್ನು ಕೇಳಿದ ನಂತರ, ಶ್ಮಶಾನದಲ್ಲಿ ಅಂತ್ಯಕಾರ್ಯವೊಂದರಲ್ಲಿ ಪಾಲ್ಗೊಂಡು ಬಂದನಂತರ, ರತಿಯ ಕೊನೆಯಲ್ಲಿ ಒಂದು ಬಗೆಯ ವೈರಾಗ್ಯ ಆವರಿಸಿಕೊಳ್ಳುತ್ತದೆಯಷ್ಟೆ. ಪುರಾಣಗಳನ್ನು ಕೇಳಿ ಈ ಬದುಕು ಮೋಕ್ಷಸಾಧನೆಗಾಗಿಯೇ ಇರುವಂಥದ್ದು ಅನ್ನಿಸಿದರೆ, ಶ್ಮಶಾನದಲ್ಲಿ ಮಾನವ ಜೀವಿತದ ನಶ್ವರತೆಯ ಅರಿವಾಗುತ್ತದೆ, ಹಾಗೇ ರತಿಕ್ರೀಡೆಯ ಕೊನೆಯಲ್ಲಿ ಸಾಕು ಸಾಕೆನ್ನುವಷ್ಟು ತೃಪ್ತಿಯಾಗಿದೆಯೆಂಬ ಭಾವ ಬರುತ್ತದೆ. ಒಂದು ವೇಳೆ ಇದೇ ಭಾವವೇ ಮಾನವರಲ್ಲಿ ಅವಿರತವಾಗಿ ಉಳಿದುಕೊಂಡರೆ ಎಲ್ಲರಿಗೂ ಮುಕ್ತಿಯೇ ಸಿಗುತ್ತಿತ್ತು. ಆದರೆ ಹಾಗಿಲ್ಲವೆನ್ನುವುದು ವಾಸ್ತವ. ಮಾನವನ ಮನಸು ಮತ್ತೆ ನಿಧಾನಕ್ಕೆ ಪ್ರವೃತ್ತಿ ಮಾರ್ಗಕ್ಕೆ ಹೊರಳಿಕೊಳ್ಳುತ್ತದೆ.

–  ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.