ಸಂಕ್ರಮಿಸು ನೀ ಹೊಸ ಹಾದಿಯಲಿ..! ಇದು ಸಂಕ್ರಾಂತಿ ವಿಶೇಷ ..

 

 

ಸಂಕ್ರಮಿಸು ನೀ ಹೊಸ ಹಾದಿಯಲಿ
ಪಥವ ಬದಲಿಸುವ ಸೂರ್ಯನಂತೆ
ಹಳೆಕಳೆಯ ಕಿತ್ತೆಸೆದು ಹೊಸತನವ ಬಿತ್ತುತ
ನಿತ್ಯ ನಿರಂತರವಾಗಿ ಬರಲಿ ನವ ಸಂಕ್ರಮಣ||
ಸಂಕ್ರಮಿಸು ನೀ ಹೊಸ ಚಿಂತನೆಯಲಿ
ಹಳೆಯ ಹಾಳು ದಿನಚರಿಯ ಕಿತ್ತೆಸೆದು
ಜಿಡ್ಡುಗಟ್ಟಿದ ಮನದ ಭಾವ ಬಿತ್ತಿಯನು
ಉಜ್ಜಿ ತೊಳೆದು ಹೊಸದಾಗಿ ಸಿಂಗರಿಸು||
ಕ್ರಮಿಸು ನೀ ಹೊಸ ಭಾವದಲಿ
ಮೊದಲಾಗಲಿ ಅದು ದಿನಚರಿಯಲ್ಲಿ
ಬದಲಾಗಲಿ ಬಾಳ ಚರ್ಯೆಯಲ್ಲಿ
ನಡೆ-ನುಡಿ ಶಿಸ್ತು ಸಂಯಮದಲ್ಲಿ||
ಕ್ರಮಿಸು ನೀ ಹೊಸ ಭರವಸೆಯಲಿ
ನಿನ್ನೆ ನಿಂತದ್ದಿಲ್ಲ ನಾಳೆ ಕಾಯುವುದಿಲ್ಲ
ಪ್ರತಿಕ್ಷಣದ ಚಲನೆಯದು ನಮ್ಮ ಪಯಣ
ಸಿಂಗರಿಸಲಿ ಮನವನ್ನು ಹಸಿರು ತೋರಣ||
ಕ್ರಮಿಸು ನೀ ಹೊಸತು ಚೈತನ್ಯದಲ್ಲಿ
ತುಳಿದ ಹಾದಿಯ ಕಸವ ಗುಡಿಸಿ ಹಾಕು
ಮುಂದಡಿಯನಿಡುವಲ್ಲಿ ರಂಗವಲ್ಲಿಯ ಇರಿಸು
ಹೊಸಹೊಸ ಯುಕ್ತಿ ನವಶಕ್ತಿ ತುಂಬಿ ಸಾಗು||
ಇನ್ನಾದರೂ ಸಂಕ್ರಮಿಸು ಹೊಸ ಹುಟ್ಟಿನಲ್ಲಿ
ನವ- ನವೀನ ಬೆಳಗುಗಳ ಸಂಕ್ರಮಣದಲ್ಲಿ…

ಶ್ರೀ ಮೋಹನ ಭರಣಿ
ಶ್ರೀದೇವಿ ಪಿಯು ಕಾಲೇಜು ಹುಲೇಕಲ್

Categories: ಹರಿತ ಲೇಖನಿ

Leave A Reply

Your email address will not be published.