ಹೊಂಡಮಯವಾದ ಕುಡ್ಲೆ ಕಡಲ ತೀರ ರಸ್ತೆ; ಪ್ರವಾಸಿಗರ ಕಷ್ಟ; ದುರಸ್ತಿಗೆ ಮನವಿ

ಗೋಕರ್ಣ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾದ ಇಲ್ಲಿನ ಕುಡ್ಲೆ ಕಡಲ ತೀರಕ್ಕೆ ಹೋಗುವ ರಸ್ತೆ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ನಿತ್ಯ ಸಾವಿರಾರು ಪ್ರವಾಸಿ ವಾಹನಗಳು ಸಂಚರಿಸುವ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ 7 ವರ್ಷಗಳ ಹಿಂದೆ “ನಮ್ಮ ಗ್ರಾಮ ನಮ್ಮ ರಸ್ತೆ” ಕೇಂದ್ರದ ಯೋಜನೆಯಲ್ಲಿ ಇಲ್ಲಿನ ಅಶೋಕೆ ಕ್ರಾಸ್ ನಿಂದ ಗೋಗರ್ಭಕ್ಕೆ ಬರುವ ರಸ್ತೆ ಮತ್ತು ಮಹಾಗಣಪತಿ ದೇವಾಲಯದ ಮೇಲ್ಭಾಗದ ರಸ್ತೆಯನ್ನು ನಿರ್ಮಿಸಲಾಗಿತ್ತು. 5 ವರ್ಷಗಳ ಕಾಲ ಗುತ್ತಿಗೆದಾರರು ರಸ್ತೆ ನಿರ್ವಣೆ ಮಾಡಿದ್ದು , ನಂತರ ಜಿಲ್ಲಾ ಪಂಚಾಯತದ ವ್ಯಾಪ್ತಿಗೆ ಬಂದಿದೆ. ಈಗ ನಿರ್ವಹಣೆಯನ್ನು ಜಿ.ಪಂ ಮಾಡಬೇಕು. ಎರಡು ವರ್ಷಗಳಿಂದ ಯಾವುದೇ ದುರಸ್ತಿ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಕೈಗೊಂಡಿಲ್ಲ. ಅಲ್ಲದೆ ರಸ್ತೆ ಸರಿಪಡಿಸುವಂತೆ ಹಲವು ಬಾರಿ ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರು ಮನವಿ ಮಾಡಿದರು ಇನ್ನೂ ಕೆಲಸ ಮಾಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ವಾಹನ ಸವಾರರಿಗೆ ಸಂಕಟ: ಇಲ್ಲಿಗೆ ಬರುವ ಪ್ರವಾಸಿಗರು ರಿಕ್ಷಾ ಇಲ್ಲವೇ ಬಾಡಿಗೆ ಬೈಕ್ ಅವಲಂಬಿಸುತ್ತಾರೆ. ಆದರೆ ಹೊಂಡಮಯ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದರಿಂದ ವಾಹನಗಳು ಕೆಟ್ಟು ನಿಲ್ಲುತ್ತದೆ ಎಂದು ಬೈಕ ಸವಾರರು ಹೇಳಿದರೆ, ರಿಕ್ಷಾದವರು ಇಲ್ಲಿನ ರಸ್ತೆ ಸಂಚಾರದಿಂದ ವಾಹನನಿರ್ವಹಣೆಗೆ ಅಧಿಕ ಹಣ ವ್ಯಯಿಸಬೇಕಾಗಿದ್ದು, ಪ್ರತಿ ನಿತ್ಯ ಒಂದಿಲ್ಲೊಂದು ರಿಪೇರಿ ಮಾಡಿಸ ಬೇಕಾಗುತ್ತದೆ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಾರೆ.

ಜಿ. ಪಂ. ಸದಸ್ಯರೆ ನಾಪತ್ತೆ: ಗೋಕರ್ಣ ಭಾಗದ ಜಿಲ್ಲಾ ಪಂಚಾಯತ ಸದಸ್ಯರು ಯಾರು ಎಂದು ಕೇಳಿದರೆ ಬಹುತೇಕರಿಗೆ ಪರಿಚಯವಿಲ್ಲವಾಗಿದ್ದು, ಇದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ಅಧಿಕಾರ ಆಸೆಯಿಂದ ಚುಣಾವಣೆಗೆ ನಿಂತು ಆಯ್ಕೆಯಾಗಿದ್ದಾರೆ. ಅವರಿಗೆ ಜನರ ತೊಂದರೆಗೆ ಸ್ಪಂದಿಸುವುದಕ್ಕೆ ಜನಪ್ರತಿನಿಧಿಯಾದಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಇದರಂತೆ ಈ ಭಾಗದ ಜಿ. ಪಂ. ವ್ಯಾಪ್ತಿಯಲ್ಲಿ ಬರುವ ಹಲವು ಕಾಮಗಾರಿಗಳು ನೆನಗುದಿಗೆ ಬಿದ್ದಿದೆ ಎಂದು ಜನರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನಾದರೂ ಜಿ. ಪಂ.ಸದಸ್ಯರು ತಮ್ಮ ಕ್ಷೇತ್ರಕ್ಕೆ ಬಂದು ತಮ್ಮನ್ನು ಪರಿಚಯಿಸಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆಯೋ ಕಾದು ನೋಡಬೇಕಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.