ಹಿರೇಗುತ್ತಿ ಬಳಿ ಹೆದ್ದಾರಿಯಿಂದ ಸಂಪರ್ಕ ರಸ್ತೆ ನೀಡಿಲ್ಲ; ಸ್ಥಳೀಯರಿಗೆ ತೊಂದರೆ; ಸಂಸದ ಅನಂತಕುಮಾರಗೆ ಮನವಿ


ಗೋಕರ್ಣ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ರಸ್ತೆ ನಿರ್ಮಾಣ ಮಾಡುತ್ತಿರುವ ಆರ್. ಆರ್. ಬಿ. ಕಂಪನಿಯವರ ಮೇಲಿನ ಹಿರೇಗುತ್ತಿ ಬಳಿ ಹೆದ್ದಾರಿಯಿಂದ ಸಂಪರ್ಕ ನೀಡದೆ ರಸ್ತೆ ನಿರ್ಮಿಸಿದ್ದು, ಇದರಿಂದ ಸ್ಥಳೀಯರು ತಮ್ಮ ನಿವಾಸಕ್ಕೆ ಹೋಗಲು ರಸ್ತೆಯೇ ಇಲ್ಲವಾಗಿದೆ. ಗುತ್ತಿಗೆ ಪಡೆದ ಕಂಪನಿಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಕೊಡುವಂತೆ ಜಿಲ್ಲಾ ಬಿ.ಜೆ.ಪಿ.ಯುವಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಗೋಕರ್ಣ ಗ್ರಾಂ. ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ ಜನ್ನು ನೇತೃತ್ವದಲ್ಲಿ ಸಂಸದ ಅನಂತಕುಮಾರ ಹೆಗಡೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಹಲವು ಬಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪನಿ, ತಾಲೂಕಾ ಆಡಳಿತಕ್ಕೆ, ಜಿಲ್ಲಾಧಿಕಾರಿಗಳಿಗೂ ಗಮನಕ್ಕೆ ತಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿನಲ್ಲಿ ತಿಳಿಸಿದ್ದಾರೆ. ಹೊಟೇಲ್‍ಗೆ ಅನುಕೂಲವಾಗುವಂತೆ ಬೇರೆಡೆ ರಸ್ತೆ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಹಿಂದುಳಿದ ವರ್ಗ ಮತ್ತು ದಲಿತರ 50ಕ್ಕೂ ಹೆಚ್ಚು ಮನೆಗಳಿವೆ. ಆದರೂ ಹೆದ್ದಾರಿಯಿಂದ ರಸ್ತೆ ಸಂಪರ್ಕ ನೀಡದೆ ಅರ್ಧ ಕಿ.ಮೀ. ದೂರ ಹೋಗಿ ಸುತ್ತಿಬಳಸಿ ಮನೆಗೆ ಬರ ಬೇಕಾದ ಅನಿವಾರ್ಯತೆ ಎದುರಾಗಿದ್ದು, ಊರಿನ ಸ್ಮಶಾನ ಸಹ ಇಲ್ಲೇ ಇದ್ದದ್ದರಿಂದ ಅಲ್ಲಿಗೂ ಕೂಡ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ನಮಗೆ ನೇರ ಸಂಪರ್ಕ ರಸ್ತೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಸಂಸದರು ಗುತ್ತಿಗೆ ಪಡೆದ ಕಂಪನಿಯವರನ್ನು ಸಂಪರ್ಕಿಸಿ ಶೀಘ್ರದಲ್ಲೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯರಾದ ಸುರೇಶ ಬಿ. ರೇವಣಕರ ಮೂರ್ತಿ ಕೆ. ಶೇಟ್ ಗುರು ಎನ್. ಶೇಟ್, ರಾಘವೇಂದ್ರ ರೇವಣಕರ, ಸಂತೋಷ ಶೇಟ್, ಸುರೇಶ ರೇವಣಕರ, ಹಾಗೂ ಸುರೇಶ ರೇವಣಕರ ಸಿದ್ದಾಪುರ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.