ವಿದ್ಯಾರ್ಥಿಗಳು ಆಧುನಿಕತೆಯ ಸದುಪಯೋಗ ಪಡೆಯಬೇಕು; ಎನ್.ಟಿ.ಪ್ರಮೋದರಾವ್

ಕುಮಟಾ: ವಿದ್ಯಾರ್ಥಿಗಳು ಆಧುನಿಕತೆಯನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ಟಿ.ಪ್ರಮೋದರಾವ್ ತಿಳಿಸಿದರು.
ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳಿಂದ ಆಯೋಜಿಸಿದ ಸರಸ್ವತಿ ಸಂಭ್ರಮ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿಯೇ ಗುರುತಿಸಿಕೊಂಡಿದೆ. ಇಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷವೃಂದದ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಲ್.ಎಂ.ಹೆಗಡೆ ಮಾತನಾಡಿ, ಕೊಂಕಣ ಎಜ್ಯುಕೇಶನ್ ಸಂಸ್ಥೆ ಸಮಾಜಕ್ಕೆ ಸ್ವಾತಿ ಮುತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳು ಅತ್ಯಗತ್ಯ. ಅಂದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ವಿಠ್ಠಲ ನಾಯಕ ಮಾತನಾಡಿ, 2019 ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಮರೆಯಲಾರದ ವರ್ಷವಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಪ್ರಥಮ, ದ್ವಿತೀಯ ರ್ಯಾಂಕ್‍ಗಳನ್ನು ಒಳಗೊಂಡಂತೆ ಮೊದಲ 10 ಸ್ಥಾನದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಿಂಹಪಾಲನ್ನು ಹೊಂದಿರುವುದು ಸಂತಸದ ಸಂಗತಿ. ಅಂತೆಯೇ, ದ್ವಿತೀಯ ಪಿ.ಯು.ಸಿಯಲ್ಲಿಯೂ ನಮ್ಮ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿರುತ್ತಾರೆ. ಪಠ್ಯವಲ್ಲದೇ, ಪಠ್ಯೇತರ ಚಟುವಟಿಕೆಗಳಲ್ಲಿಯೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ ಎಂದ ಅವರು, 26 ವರ್ಷಗಳ ಸಂಸ್ಥೆಯ ಸೇವೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿರುವ ಸಂಸ್ಥೆಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟಿಗಳಾದ ರಮೇಶ ಪ್ರಭು, ಅಶೋಕ ಪ್ರಭು, ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ, ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ವಿನಯಾ ನಾಯಕ ಹಾಗೂ ಮಾತೃಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಕ ಶಿವಾನಂದ ಭಟ್ಟ ಸ್ವಾಗತಿಸಿ, ಪರಿಚಯಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಪ್ರಕಾಶ ಗಾವಡಿ, ಗೌರೀಶ ಭಂಡಾರಿ, ಅಮಿತಾ ಗೋವೇಕರ್ ನಿರೂಪಿಸಿದರು. ಪ್ರಾಚಾರ್ಯೆ ಡಾ.ಸುಲೋಚನಾ ರಾವ್ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.