ಯಲ್ಲಾಪುರದಲ್ಲಿ ಹೊಸ್ತೋಟ ಮಂಜುನಾಥ ಭಾಗವತರಿಗೆ ನುಡಿನಮನ ಸಲ್ಲಿಕೆ

ಯಲ್ಲಾಪುರ: ಪಟ್ಟಣದ ರವೀಂದ್ರನಗರ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಟ್ರಸ್ಟ್ ವತಿಯಿಂದ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರಿಗೆ ನುಡಿನಮನ ಸಲ್ಲಿಸಲಾಯಿತು.

ಅರ್ಥದಾರಿ ಸಿ. ಜಿ. ಹೆಗಡೆ ಮಾತನಾಡಿ, ನೇರ ನಡೆ-ನುಡಿ, ಸತ್ಯವಂತಿಕೆಯ ಉತ್ತಮ ವ್ಯಕ್ತಿತ್ವ ಹೊಂದಿದ್ದ ಭಾಗವತರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು. ಹಲವರು ತಮ್ಮ ದಾಖಲೆಗಾಗಿ ಅವರನ್ನು ಬಳಸಿಕೊಂಡರೇ ಹೊರತು, ಅವರ ಜ್ಞಾನದ ದಾಖಲೀಕರಣ ಮಾಡಲು ಮುಂದಾಗಲಿಲ್ಲ. ಅವರ ಪ್ರಸಂಗಗಳು, ಯಕ್ಷಗಾನದ ಕುರಿತು ಅವರ ವಿಚಾರಗಳು ಅವರನ್ನು ಅಮರರನ್ನಾಗಿಸಿದೆ ಎಂದರು.

ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ ಮಾತನಾಡಿ, ಕೇವಲ ಯಕ್ಷಗಾನಕ್ಕಷ್ಟೇ ಅಲ್ಲ, ಕನ್ನಡಕ್ಕೆ ಒಬ್ಬರೇ ಹೊಸ್ತೋಟರು. ಯಕ್ಷಗಾನ ಹಾಗೂ ಕನ್ನಡ ಸಾಹಿತ್ಯಕ್ಕೆ ಅವರು ಅಗಾಧ ಸಂಪತ್ತನ್ನು ನೀಡಿದ್ದಾರೆ. ಪ್ರತಿಯೊಬ್ಬ ಯಕ್ಷಗಾನ ಕಲಾವಿದನೂ ಅವರಿಂದ ಒಂದಲ್ಲ ಒಂದು ವಿಷಯ ಕಲಿತಿದ್ದು, ಎಲ್ಲರಿಗೂ ಅವರು ಗುರು ಸಮಾನರಾಗಿದ್ದರು ಎಂದು ಹೇಳಿ, ಹೊಸ್ತೋಟರ ಕುರಿತು ತಾವು ರಚಿಸಿದ ಭಾಮಿನಿ ಹಾಗೂ ವಾರ್ಧಿಕವನ್ನು ಪ್ರಸ್ತುತಪಡಿಸಿದರು.

ಕಲಾವಿದ ಸತೀಶ ಯಲ್ಲಾಪುರ, ಯಕ್ಷಗಾನ ಹಾಗೂ ಕಲಾಮಿತ್ರ ಟ್ರಸ್ಟ್‍ನ ಪ್ರಮುಖ ಸುಬ್ರಾಯ ಹೆಗಡೆ ಮಳಗಿಮನೆ ನುಡಿನಮನ ಸಲ್ಲಿಸಿದರು. ಅನಂತ ಹೆಗಡೆ, ನರಸಿಂಹ ಭಟ್ಟ ಹಂಡ್ರಮನೆ, ವಿಠ್ಠಲ ಪೂಜಾರಿ, ಪ್ರಶಾಂತ ಹೆಗಡೆ ಕೈಗಡಿ ಗಾನ ನಮನ ಸಲ್ಲಿಸಿದರು. ಮಂಡಳಿಯ ವಿದ್ಯಾರ್ಥಿಗಳು ನೃತ್ಯನಮನ ಸಲ್ಲಿಸಿದರು. ಪ್ರಮುಖರಾದ ಶ್ರೀಧರ ಹೆಗಡೆ, ಶಿವಾನಂದ ಹೆಗಡೆ, ರಾಘವೇಂದ್ರ ಭಟ್ಟ ಬೆಳಸೂರು, ವಿಜಯ ಹಿರೇಮಠ, ಸುಬ್ರಾಯ ಭಟ್ಟ ಆನೆಜಡ್ಡಿ, ಮಂಜುನಾಥ ಹೆಗಡೆ ಹಿಲ್ಲೂರು ಇತರರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.