ಮನುಷ್ಯನ ಮನಸ್ಸಿನಲ್ಲಿ ಸಮ್ಯಕ್ ರೀತಿ ಸಂಕ್ರಮಣ ಶುರುವಾಗಬೇಕು; ರಘುನಂದನ


ಶಿರಸಿ: ಸಂಕ್ರಮಣ ಶುರುವಾಗಬೇಕಿರುವುದು ಮನುಷ್ಯನ ಮನಸ್ಸಿನಲ್ಲಿ. ಹಾಗಾಗಿ ಮನಸ್ಸು ಸಮ್ಯಕ್ ರೀತಿಯಲ್ಲಿ ಬದಲಾಗಬೇಕು ಎಂಬುದು ಸಂಕ್ರಾಂತಿಯ ದಿನದ ಅಪೇಕ್ಷೆ. ಕತ್ತಲಿನಲ್ಲಿ ನಡಿಗೆ ಕಷ್ಟ. ಅದೇ ಬೆಳಕಿನಲ್ಲಿ ನಡಿಗೆ ಸುಲಭ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಜ್ಞಾಪ್ರವಾಹ ಸಂಯೋಜಕ ರಘುನಂದನ ಹೇಳಿದರು.

ಅವರು ಭಾನುವಾರ ತಾಲೂಕಿನ ಹೆಗಡೆಕಟ್ಟಾದಲ್ಲಿ ಸಂಕ್ರಾಂತಿ ಅಂಗವಾಗಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದರು.
ಸಂಕ್ರಾಂತಿ ಎನ್ನುವುದು ಸತ್ಯಂ-ಶಿವಂ-ಸುಂದರಮ್ ಇದ್ದಂತೆ. ಹೆಚ್ಚು ಕಾಲ ಬಾಳುವಂತದ್ದು ಸತ್ಯ. ಶಿವ ಎಂದರೆ ಒಳ್ಳೆಯದು ಎಂದರ್ಥ. ಸುಂದರಮ್ ಎಂದರೆ ಚೆನ್ನಾಗಿರುವಂತದ್ದು. ಅದೇ ರೀತಿ ಇದೆಲ್ಲವನ್ನು ಒಳಗೊಂಡಿರುವುದು ಸಂಕ್ರಾಂತಿಯ ಸಂದೇಶವಾಗಿದೆ. ಮಕರ ಸಂಕ್ರಮಣದಿಂದ ಹಗಲಿನ ಪ್ರಮಾಣ ಜಾಸ್ತಿ. ನಮ್ಮಲ್ಲಿ ಬೆಳಕು ಎನ್ನುವುದಕ್ಕೆ ಜ್ಞಾನ ಎಂದರ್ಥವಿದೆ ಆ ನಿಟ್ಟಿನಲ್ಲಿ ನಾವೆಲ್ಲ ಜ್ಞಾನಾರ್ಜನೆಗೆ ಪ್ರಯತ್ನಿಸಬೇಕಿದೆ ಎಂದರು.

ಶಕ್ತಿಗಿಂತ ವಿವೇಕಕ್ಕೆ ಹೆಚ್ಚು ಗೌರವ ಕೊಡಿವ ಜನ ನಾವು. ಶಕ್ತಿಯ ಜೊತೆಗೆ ವಿವೇಕವೂ ಬೆಳೆಯಬೇಕು. ವಿವೇಕವಿಲ್ಲದ ಶಕ್ತಿ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಇದೇ ಸಂಕ್ರಾಂತಿಯಂದು ಈ ದೇಶದ ಮಹಾಪುರುಷನೊಬ್ಬನ ಜನ್ಮವಾಗಿದೆ. ರಾಮಕೃಷ್ಣ ಪರಮಹಂಸರಿಂದ ನರೇಂದ್ರ ವಿವೇಕಾನಂದನಾದ. ಆತನ ಕಾರಣಕ್ಕಾಗಿ ಭಾರತದ ಪ್ರಭೆ ಜಗತ್ತಿನಲ್ಲಿ ಹೆಚ್ಚಿದೆ. ಅಂದಿನ ಮೆಕಾಲೆ ಇಲ್ಲಿಯ ಜನರಿಗೆ ಇಂಗ್ಲಿಷ್ ಮೋಹವನ್ನು ಹಬ್ಬಿಸಿದರೆ, ಆದೇ ಶಿಕ್ಷಣ ಪಡೆದ ನರೇಂದ್ರ ಜಗತ್ತಿಗೆ ಹಿಂದೂ ಧರ್ಮವನ್ನು ಪರಿಚಯಿಸಿದ. ಯಾವಾಗ ಮತಾಂಧರು ಯಹೂಧಿಗಳನ್ನು, ಮುಸಲ್ಮಾನರು ಪಾರ್ಸಿಯನ್ನು ಓಡಿಸಿದಾಗ ಅವರಿಗೆಲ್ಲರಿಗೂ ಆಶ್ರಯ ಕೊಟ್ಟಂತಹ ದೇಶ ನಮ್ಮದಾಗಿದೆ.

ಧರ್ಮ ಎನ್ನುವ ಪದ ಭಾರತದ್ದೇ ಆಗಿದೆ. ಹಸಿದವನಿಗೆ ಊಟ ಹಾಕುವುದು ಧರ್ಮ. ಜಗತ್ತಿಗೆ ಧರ್ಮವನ್ನು ಕೊಟ್ಟವರು ನಾವು. ಜಗತ್ತಿಗೆ ಯೋಗವನ್ನು, ಊಟದ ಪದ್ದತಿಯನ್ನು, ಆಯುರ್ವೇದವನ್ನು ಕೊಟ್ಟವರು ಹಿಂದೂ ಧರ್ಮದವರಾಗಿದ್ದಾರೆ. ಇಂತಹ ಸನಾತನ ಶ್ರೀಮಂತಿಕೆಯನ್ನು ಹೊಂದಿದ್ದವರು ನಾವು ಅವನತಿಗೆ ಹೋಗಿದ್ದು ಬೌದ್ಧಿಕ ಅಧಃಪತನಕ್ಕೆ ಸಾಗಿತು. ನಮ್ಮ ಕೆಟ್ಟದಾದ ಸಾಮಾಜಿಕ ಸ್ಥಿತಿಯಿಂದ ನಮ್ಮ ಗುಲಾಮಿಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ವಿವೇಕಾನಂದರ ಮಾತಿನಂತೆ ಎಲ್ಲ ದೇವರಿಗಿಂತ ಮೊದಲು ಭಾರತಮಾತೆಯ ಪೂಜೆ ನಡೆಯಬೇಕು. ಹಿಂದುಗಳಲ್ಲಿನ ಸಮಸ್ಯೆಗಳಿಂದಾಗಿ ನಮ್ಮಲ್ಲಿ ಗುಲಾಮಿತನ ಬೇರೂರಿದೆ ಎಂದರು.

ದೇಶದ ಸಮೃದ್ಧಿಗೆ ವ್ಯಕ್ತಿ ನಿರ್ಮಾಣಕ್ಕಿಂತ ಇನ್ನೊಂದು ದಾರಿ ಬೇರಿಲ್ಲ. ಆ ಕಾರಣಕ್ಕೆ ಹೆಡಗೇವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ಅದರ ಕಾರ್ಯದ ಪರಿಣಾಮ ಇಂದು ದೇಶದಲ್ಲಿ ಕಾಣುತ್ತಿದೆ. ಶರಿಯತ್ ಎನ್ನುತ್ತಿದ್ದ ಅಸಾದುದ್ದೀನ್ ಓವೈಸಿ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶ ಒಡೆಯುವವರ ಕೈಯಲ್ಲಿ ಇಂದು ರಾಷ್ಟ್ರಧ್ವಜ ಹಾರಾಡುತ್ತಿದೆ. ಅಂಂ ವಿಚಾರದಲ್ಲಿ ಅಂದು ಗಾಂಧೀಜಿ, ನೆಹರು, ವಲ್ಲಭಭಾಯ್ ಪಟೇಲರು ಪುನರುಚ್ಛಿಸಿದ್ದ ವಿಚಾರವನ್ನೇ ಇಂದಿನ ಕೇಂದ್ರ ಸರಕಾರ ಮಾಡಿದೆ. ದೇಶದ ಒಳಿತನ್ನು ಬಯಸುವವರು ಇಂದು ಮನೆಯಿಂದ ಹೊರಬರುವ ಅನಿವಾರ್ಯತೆ ಇದೆ. ಮನೆಯಲ್ಲಿ ಒಂದು ಸೊಳ್ಳೆ ಬರಬಾರದೆಂದು ಸೊಳ್ಳೆಪರದೆ, ಆಲ್ ಔಟ್, ಸೊಳ್ಳೆ ಬ್ಯಾಟ್ ಬಳಸುವ ನಾವು ದೇಶ ಒಡೆಯಲು ಬಂದವರನ್ನು ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ.ಇಂದು ನಮ್ಮ ಮನೆಯಲ್ಲಿ ಕಂಡಿದ್ದನ್ನು ತಿನ್ನುವ ಹಾವು-ಹೆಗ್ಗಣಗಳು ನಾಳೆ ನಮ್ಮದೇ ಪಕ್ಕದ ಮನೆಗೆ ಹೋಗುತ್ತದೆ.

NRC ಕೇವಲ ಅಸ್ಸಾಂಗೆ ಮಾತ್ರ ಅನುಷ್ಟಾನಕ್ಕೆ ಬರಬಾರದು, ಬದಲಾಗಿ ಇಡಿ ದೇಶಕ್ಕೆ ಅನ್ವಯವಾಗುವಂತೆ ಮಾಡಬೇಕು. ದೇಶ ಒಡೆಯುವವರು ಅವರ ಕೆಲಸ ಮಾಡುವಾಗ ದೇಶವನ್ನು ಒಗ್ಗೂಡಿಸುವವರೂ ಸಹ ನಮ್ಮ ಕೆಲಸ ಹೆಚ್ಚು ಮಾಡಬೇಕಿದೆ. ನಮ್ಮ ಕಣ್ಣೆದುರಿಗಿನ ಸಮಸ್ಯೆಗಳಿಗೆ ಪರಿಹಾರ ನಾವೇ ಆಗುವುದು ಹೇಗೆ ಎಂದು ಯೋಚಿಸಬೇಕು. ಈ ದೇಶದ ಶಕ್ತಿ ಯುವಶಕ್ತಿ ಆಗಿದೆ. ಸಂಕ್ರಾಂತಿ ಎಲ್ಲಿಂದ ಪ್ರಾರಂಭವಾಗಬೇಕು ಎಂದರೆ ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕು. ಕಾಲಕ್ಕೆ ತಕ್ಕ ಪರಿವರ್ತನೆ ಆಗುವುದು ಹಿಂದು ಧರ್ಮದ ವಿಶೇಷ. ಒಳ್ಳೆಯದನ್ನು ಸ್ವೀಕಾರ ಮಾಡುವುದು ನಮ್ಮ ಎಂದಿನ ವಿಚಾರವಾಗಿದೆ. ಆಚರಣೆಯ ಜೊತೆಗೆ ಭಾವವನ್ನು ತಿಳಿದುಕೊಳ್ಳಬೇಕು. ಸಂಕ್ರಾಂತಿ ಇಡಿ ಜಗತ್ತಿಗೆ ಒಳಿತನ್ನು ಮಾಡಲಿ. ಜಗತ್ ಕಲ್ಯಾಣ ಎಲ್ಲ ಹಿಂದುಗಳ ಆಸೆಯಾಗಿದೆ. ಎಲ್ಲರ ಜೀವನದಲ್ಲಿ ಶುಭ ಪರಿವರ್ತನೆ ತರಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಗಜಾನನ ಪ್ರೌಢಶಾಲೆಯ ಅಧ್ಯಕ್ಷ ಮಂಜುನಾಥ ಹೆಗಡೆ ಮಾತನಾಡಿ, ಹಿಂದು ಎನ್ನುವುದು ಕೇವಲ ಧರ್ಮವಲ್ಲ, ಬದಲಾಗಿ ಇದೊಂದು ಜೀವನ ಪದ್ಧತಿ. ನಾಲ್ಕು ಸಾವಿರ ವರ್ಷಗಳ ಹಿಂದೆ ದಾಳಿಗೈದ ಎಲ್ಲರೂ ಈ ಧರ್ಮದಲ್ಲಿಯೇ ವಿಲೀನತೆಯನ್ನು ಹೊಂದಿದ್ದಾರೆ. ಇತಿಹಾಸದ ಏಕಮೇವ ಉದಾಹರಣೆಯಾಗಿ ನಮ್ಮ ಹಿಂದೂ ಧರ್ಮ ಆಗಿದೆ. ಯಾರನ್ನೂ ದ್ವೇಷಿಸುವುದು ಬೇಡ. ಎಲ್ಲರನ್ನೂ ಪ್ರೀತಿಸೋಣ. ಇತ್ತಿಚಿನ ದಿನದಲ್ಲಿ ಕೆಲವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರ ಎಂದುಕೊಂಡಿದ್ದಾರೆ. ನಮ್ಮ ಅಸ್ತಿತ್ವವನ್ನು ಅಲುಗಾಡಿಸುವ ಶಕ್ತಿಯನ್ನು ಮೆಟ್ಟಿ ನಿಲ್ಲೋಣ. ಸಂಕ್ರಾಂತಿ ಸರ್ವರಿಗೂ ಒಳಿತನ್ನುಂಟು ಮಾಡಲಿ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಹೆಗಡೆಕಟ್ಟಾದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಸಂಚಲನ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘಚಾಲಕ ವಿ ಆರ್ ಹೆಗಡೆ ಹೊನ್ನೆಗದ್ದೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಊರಿನ ಮಾತೆಯರು, ಸಜ್ಜನ ಬಂಧುಗಳು ಉಪಸ್ಥಿತರಿದ್ದರು. ವಿನಾಯಕ ಕಾನಳ್ಳಿ ವಯಕ್ತಿಕ ಗೀತೆ ಹಾಡಿದರು. ಈಶ್ವರ ರಾಗಿಹೊಸಳ್ಳಿ ಸ್ವಾಗತಿಸಿದರು. ಶ್ರೀಧರ ತೆಂಗಿನಗದ್ದೆ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.