ಹೊಸ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು: ಈಶ್ವರ ನಾಯ್ಕ

ಕುಮಟಾ: ವಿಜ್ಞಾನ ವ್ಯಾಪ್ತಿ ಬಹಳ ವಿಸ್ತಾರವಾಗಿದ್ದು, ಮೂಢನಂಬಿಕೆ ಹೋಗಲಾಡಿಸಿ, ನೂತನ ತಂತ್ರಜ್ಞಾನದ ಆವಿಷ್ಕಾರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ವಿಜ್ಞಾನ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದು ಡಯಟ್ ಕಾಲೇಜಿನ ಪ್ರಾಂಶುಪಾಲ ಈಶ್ವರ ನಾಯ್ಕ ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡ ಮಕ್ಕಳ ವಿಜ್ಞಾನ ಹಬ್ಬ 2019 ಇದರ ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ವಿಜ್ಞಾನದಿಂದ ದಿನದಿಂದ ದಿನಕ್ಕೆ ಮನುಷ್ಯನಿಗೆ ಬಹಳ ಉಪಕಾರಿಯಾಗುತ್ತಿದೆ. ವಿಜ್ಞಾನದ ಉಪಯೋಗಗಳನ್ನು ಮನುಷ್ಯರು ಸಮರ್ಪಕವಾಗಿ ಬಳಸಿಕೊಂಡು, ಒಳ್ಳೆಯ ಚಟುವಟಿಕೆಗಳಿಗಳಿಗೆ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳುವ ಅನಿವಾರ್ಯತೆಯಿದೆ ಎಂದರು.

ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರೇಖಾ ನಾಯಕ ಪ್ರಾಸ್ತಾವಿಕ ಮಾತನಾಡಿ, ಆಯ್ದ ತಾಲೂಕುಗಳಲ್ಲಿ 2-3 ಕ್ಲಷ್ಟರ್‍ಗಳಲ್ಲಿ ಪ್ರಾಯೋಗಿಕವಾಗಿ ವಿಜ್ಞಾನ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಎಲ್ಲ ಶಾಲೆಗಳಿಗೂ ವಿಸ್ತರಣೆ ಮಾಡುವ ಗುರಿ ರಾಜ್ಯ ಸರ್ಕಾರ ಹೊಂದಿದ್ದು, ಸಂತಸದಿಂದ ಅಧ್ಯಯನ ಕೈಗೊಂಡಾಗ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಶಾಲೆಯಲ್ಲಿ ಸಂತಸದ ವಾತಾವರಣ ನಿರ್ಮಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷೆ ಲಕ್ಷ್ಮೀ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕಿ ಮಂಗಲಾ ನಾಯ್ಕ, ಬಿ.ಆರ್.ಸಿ ರೇಖಾಮಣಿ ಪಟಗಾರ, ಸಿ.ಆರ್.ಪಿ ಆರ್.ಟಿ.ಗೌಡ ಮತ್ತಿತರರು ಉಪಸ್ಥಿತರಿದ್ದರು. ಸಿ.ಆರ್.ಪಿ ವಿನಯ ಪಟಗಾರ ಸ್ವಾಗತಿಸಿದರು. ಗುಡಿಗಾರಗಲ್ಲಿ ಶಾಲೆಯ ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಶಿಕ್ಷಕ ನಾಗರಾಜ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಹಾಡಿನ ಹಾಗೂ ಪ್ರಾಯೋಗಿಕ ವಿಧಾನಗಳ ಮೂಲಕ ವಿಜ್ಞಾನದ ಕುರಿತು ಅರಿವು ಮೂಡಿಸಲಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.