ಕ್ಯಾಶ್ಯೂ ಇಂಡಸ್ಟ್ರಿ ಕಾರ್ಮಿಕರ ಅಮಾನತು: ಹೋರಾಟದ ಎಚ್ಚರಿಕೆ

ಕುಮಟಾ: ತಾಲೂಕಿನ ದೇವಗಿರಿ ಗ್ರಾಪಂ ವ್ಯಾಪ್ತಿಯ ದಾರೇಶ್ವರ ಸಮೀಪದ ಗೋರೆಯ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಮೂರುವರೆ ತಿಂಗಳಿನಿಂದ ಕೆಲಸ ನೀಡದೇ ನಿರಾಕರಿಸಿದಲ್ಲದೇ, ಕೆಲ ಕಾರ್ಮಿಕರನ್ನು ಅಮಾನತು ಮಾಡಿರುವುದರಿಂದ ಕಾರ್ಮಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಸಂಬಂಧಪಟ್ಟವರು ಶೀಘ್ರದಲ್ಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕ್ಯಾಶ್ಯೂ ಇಂಡಸ್ಟ್ರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತಿಲಕ್ ಗೌಡ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು. ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯಲ್ಲಿ 350 ಕ್ಕೂ ಹೆಚ್ಚು ಬಡ ಕಾರ್ಮಿಕರಿದ್ದು, ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಮೂರುವರೆ ತಿಂಗಳಿನಿಂದ ಕೆಲಸ ನೀಡದೇ ನಿರಾಕರಿಸಿದಲ್ಲದೇ ಕೆಲ ಕಾರ್ಮಿಕರನ್ನು ಅಮಾನತು ಮಾಡಿರುವುದರಿಂದ ಕಾರ್ಮಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ.

ಈ ಹಿಂದೆ ಬೆಳಗಾವಿಯ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 6-7 ಸಭೆಗಳು ನಡೆದಿವೆ. ಆಡಳಿತ ಮಂಡಳಿಯೂ ಸಹ ಸಭೆಗೆ ಹಾಜರಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಒಪ್ಪಿಗೆ ಸೂಚಿಸಿದ ರೀತಿಯಲ್ಲಿ ನಂತರ ಕೆಲಸ ಮಾಡಿಲ್ಲ. ಇದರಿಂದಾಗಿ ಇಂದಿಗೂ ಕಾರ್ಮಿಕರ ಸಮಸ್ಯೆ ಹಾಗೆಯೇ ಉಳಿದಿದೆ. ಈ ಸಮಸ್ಯೆ ಸರಿಯಾಗಬಹುದು ಎಂಬ ದೃಷ್ಟಿಯಿಂದ ಮೂರುವರೆ ತಿಂಗಳುಗಳ ಕಾಲ ನಾವು ಕಾದಿದ್ದೇವೆ. ಆದರೆ ಈವರೆಗೂ ಕಾರ್ಮಿಕರಿಗೆ ಯಾವುದೇ ಕಾನೂನು ಬದ್ಧ ಸೌಲಭ್ಯ ನೀಡುತ್ತಿಲ್ಲ. ಸಾಮಾನ್ಯ ಭತ್ತೆಯನ್ನೂ ಸಹ ಸರಿಯಾಗಿ ನೀಡಲಾಗುತ್ತಿಲ್ಲ. ಅಲ್ಲದೇ, ಕೆಲಸದಿಂದ ಹೊರಗಿರುವ ಕಾರ್ಮಿಕರಿಗೆ ಮತ್ತೆ ಕೆಲಸ ನೀಡುವ ನಿಟ್ಟಿನಲ್ಲಿ ಯಾವ ಕಾರ್ಯವೂ ಆಗುತ್ತಿಲ್ಲ. ಮ್ಯಾನೇಜಮೆಂಟ್ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ವಿಷಯವನ್ನು ನಾವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಈ ವರೆಗೆ ಕಾರ್ಮಿಕ ಇಲಾಖೆ ಬಡ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸುತ್ತಿಲ್ಲ. ಸರಕಾರದ ಅಧಿಕಾರಿಗಳ ತಪ್ಪು ನೀತಿಯಿಂದಾಗಿ ಇಂದು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕ ತನ್ನ ತಾಳ್ಮೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಇದೇ ತಿಂಗಳ 16 ರಂದು ಬೆಳಗಾವಿಯ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸಂದಾನದ ಮಾತುಕತೆಗೆ ನಿರ್ಧರಿಸಲಾಗಿದೆ. ಈ ಸಭೆಗೆ ಕಾರ್ಮಿಕ ಸಂಘದವರನ್ನು ಹಾಗೂ ಆಡಳಿತ ಮಂಡಳಿಯವರನ್ನು ಕರೆಯಲಾಗಿದೆ. ಒಂದು ವೇಳೆ ಸಂಧಾನ ಮಾತುಕತೆಯಾದಲ್ಲಿ ಎಲ್ಲ ಕಾರ್ಮಿಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಿದ್ಧರಿದ್ದಾರೆ. ಅದರೊಂದಿಗೆ ಸರಕಾರಿ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಬೇಕಾಗುತ್ತದೆ. ಆದರೆ ಒಂದು ವೇಳೆ ಆಡಳಿತ ಮಂಡಳಿ ಕಾರ್ಮಿಕರಿಗೆ ಕೆಲಸ ನೀಡಲು ನಿರಾಕರಿಸಿದಲ್ಲಿ ಡಿ.20 ರ ಒಳಗಾಗಿ ಉಗ್ರ ಹೋರಾಟ ನಡೆಸುವ ಕುರಿತು ತಿರ್ಮಾನಿಸುತ್ತೇವೆ ಎಂದರು.

ರಿಲಾಯೆಬಲ್ ಕ್ಯಾಶ್ಯೂ ಇಂಡಸ್ಟ್ರಿ ಕಾರ್ಮಿಕರಾದ ಸರೋಜಾ ಪಟಗಾರ, ಸದಾನಂದ ನಾಯ್ಕ ಹಾಗೂ ನೂರಾರು ಕಾರ್ಮಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.