ಡಿ.13ಕ್ಕೆ ಬೆಟ್ಟಕೊಪ್ಪದಲ್ಲಿ ‘ನಮ್ಮನೆ ಹಬ್ಬ’: ‘ಪಂಚಪಾವನ ಕಥಾ’ ಲೋಕಾರ್ಪಣೆ

ಶಿರಸಿ: ತಾಲೂಕಿನ ಗ್ರಾಮೀಣ ಬೆಟ್ಟಕೊಪ್ಪದಲ್ಲಿ ಡಿ.13 ರಂದು ಸಂಜೆ 5 ರಿಂದ ವಿಶ್ವಶಾಂತಿ ಸರಣಿಗೆ ಐದನೇ ಯಕ್ಷ ನೃತ್ಯ ರೂಪಕ ಲೋಕಾರ್ಪಣೆ, ಕಲಾ ಸಾಧಕರಿಗೆ ಪುರಸ್ಕಾರ, ಸಾಂಸ್ಕೃತಿಕ ಸಂಭ್ರಮದ ಎಂಟನೇ ವರ್ಷದ ‘ನಮ್ಮನೆ ಹಬ್ಬ 2019’ ನಡೆಯಲಿದೆ.

ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಯುವ ಗಾಯಕಿ ಶಿರಸಿಯ ಭೂಮಿ ದಿನೇಶ ಹೆಗಡೆ ಅವಳಿಂದ ರಸ ಗೀತ ಪ್ರಸ್ತುತದ ಮೂಲಕ ಚಾಲನೆ ಪಡೆದುಕೊಳ್ಳಲಿದೆ.

ಉದ್ಘಾಟನೆ- ಸಮ್ಮಾನ: ಅಂದು ಸಂಜೆ 5:45ಕ್ಕೆ ನಾಡಿನ ಹೆಸರಾಂತ ಸಾಹಿತಿ, ‘ಕ್ಷಣ ಹೊತ್ತು ಆಣಿ ಮುತ್ತು’ ಲೇಖಕ ಎಸ್.ಷಡಕ್ಷರಿ ಅವರು ನಮ್ಮನೆ ಹಬ್ಬ ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ಅಂತರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿ ಪಡೆದ ನಿರ್ದೇಶಕ ಪಿ.ಶೇಷಾದ್ರಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್, ವಿ. ಉಮಾಕಾಂತ ಭಟ್ಟ ಕೆರೇಕೈ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಸಹಕಾರಿ ಸೀತಾರಾಮ ರಾ. ಹೆಗಡೆ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಟ್ರಸ್ಟನ ಅಧ್ಯಕ್ಷೆ ಪ್ರಸಿದ್ಧ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ವಹಿಸಿಕೊಳ್ಳಲಿದ್ದಾರೆ.

ಇದೇ ವೇಳೆ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ನರ್ತನ ಶೈಲಿಯ ಮೂಲಕ ಗಮನ ಸೆಳೆದ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ, ಯಕ್ಷಗಾನ ಹಾಗೂ ಪ್ರಸಾದನ ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಅವರಿಗೆ ನಮ್ಮನೆ ಪುರಸ್ಕಾರ, ಯುವ ಗಾಯಕಿ ರೇಖಾ ದಿನೇಶ ಹಾಗೂ ದಿನೇಶ ಹೆಗಡೆ ಪುತ್ರಿ ಯುವ ಗಾಯಕಿ ಭೂಮಿ ಹೆಗಡೆ ಅವಳಿಗೆ ನಮ್ಮನೆ ಯುವ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.

ಪಂಚ ಪಾವನದ ಕಥೆ: ಕಳೆದ ನಾಲ್ಕು ವರ್ಷಗಳಿಂದ ವಿಶ್ವಶಾಂತಿ ಸರಣಿಗೆ ಪ್ರತೀ ವರ್ಷ ಹೊಸ ಕಥೆಯೊಂದನ್ನು ಆಧರಿಸಿ ಒಂದುಕಾಲು ಗಂಟೆಗಳ ರೂಪಕ ಸೇರ್ಪಡೆ ಆಗುತ್ತಿದ್ದು, ಈ ವರ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಅವರ ಸಾಹಿತ್ಯ ನಿರ್ದೇಶನದ ಐದನೇ ಯಕ್ಷ ನೃತ್ಯ ರೂಪಕ ಪಂಚ ಪಾವನ ಕಥಾ ಲೋಕಾರ್ಪಣೆಗೊಳ್ಳಲಿದೆ.
ಪಂಚ ಪಾವನದ ಕಥೆಯನ್ನು ಆಧರಿಸಿ ಪ್ರಸ್ತುಗೊಳ್ಳುವ ಈ ರೂಪಕವನ್ನು ಶಿರಸಿ ಲಯನ್ಸ ಶಾಲೆಯ ಐದನೇ ವರ್ಗದ ವಿದ್ಯಾರ್ಥಿನಿ ತುಳಸಿ ಹೆಗಡೆ ಮುಮ್ಮೇಳದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.

ಹೆಸರಾಂತ ಭಾಗವತ ಕೇಶವ ಹೆಗಡೆ ಕೊಳಗಿ, ನಾದ ಶಂಕರ ಶಂಕರ ಭಾಗವತ್ ಯಲ್ಲಾಪುರ, ಚಂಡೆವಾದಕ ವಿಘ್ನೇಶ್ವರ ಗೌಡ ಕೆಸರಕೊಪ್ಪ ಹಿಮ್ಮೇಳದಲ್ಲಿ ಪಾಲ್ಗೊಳ್ಳುವರು. ರೂಪಕದ ಮೂಲ ಕಲ್ಪನೆ ರಮೇಶ ಹೆಗಡೆ ಹಳೇಕಾನಗೋಡ, ನೃತ್ಯ ಸಲಹೆಯನ್ನು ವಿನಾಯಕ ಹೆಗಡೆ ಕಲಗದ್ದೆ, ಹಿನ್ನಲೆ ಧ್ವನಿಯನ್ನು ಡಾ. ಶ್ರೀಪಾದ ಭಟ್ಟ ನೀಡಿದ್ದಾರೆ. ವಿ.ಉಮಾಕಾಂತ ಭಟ್ಟ ಅವರ ಸಲಹೆ, ಸಹಕಾರ, ವೆಂಕಟೇಶ ಹೆಗಡೆ ಪ್ರಸಾದನ ನೀಡಲಿದ್ದಾರೆ. ಯಕ್ಷ ಶಿಕ್ಷಣವನ್ನು ಜಿ.ಎಸ್.ಭಟ್ಟ ಪಂಚಲಿಂಗ, ಧ್ವನಿಗ್ರಹಣವನ್ನು ಉದಯ ಪೂಜಾರ ಮಾಡಿದ್ದಾರೆ. ಗಾಯತ್ರೀ ರಾಘವೇಂದ್ರ ನಿರ್ವಹಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.