ಸಮಾಜ ವಿಜ್ಞಾನ ಶಿಕ್ಷಕರು ಮಕ್ಕಳಿಗೆ ಮೂಲಭೂತ ತಿಳುವಳಿಕೆ ನೀಡಬೇಕು: ಎನ್ ಆರ್ ಗಜು

ಕುಮಟಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ಸಂಘದಡಿ ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ ತಾಲೂಕಾ ಮಟ್ಟದ ಕಾರ್ಯಾಗಾರ ಇಲ್ಲಿನ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು.

ಮುಖ್ಯಾಧ್ಯಾಪಕ ಎನ್.ಆರ್.ಗಜು ಕಾರ್ಯಾಗಾರವನ್ನು ಉದ್ಘಾಟಿಸಿ, ಸಮಾಜ ವಿಜ್ಞಾನ ವಿಷಯ ಅತ್ಯಂತ ವಿಸ್ತಾರವಾಗಿದೆ. ಇತಿಹಾಸ, ಪೌರನೀತಿ, ಭೂಗೋಳ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ ಮೊದಲಾದ ಮೂಲಭೂತ ತಿಳುವಳಿಕೆಗಳನ್ನು ಮಕ್ಕಳಿಗೆ ಎಳೆಎಳೆಯಾಗಿ ಬಿತ್ತರಿಸಿ, ಸಾಮಾಜಿಕ ಹೊಂದಾಣಿಕೆಯ ಬದುಕನ್ನು ಬಿಂಬಿಸುವ ಕಲೆ ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರದ್ದಾಗಿದೆ. ಅಲ್ಲದೇ, ಅವರ ಹೊಣೆಗಾರಿಕೆ ಸಾಮಾಜಿಕ ಪ್ರಗತಿಗೆ ಪೂರಕವಾಗಿರಬೇಕು. ಐಎಎಸ್, ಐಪಿಎಸ್ ಅಧ್ಯಯನಕ್ಕೆ ಸಮಾಜವಿಜ್ಞಾನ ಅತ್ಯಂತ ಮಹತ್ವದ್ದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹೊನ್ನಾವರ ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಎಂ.ಎಂ.ನಾಯ್ಕ ಮಾತನಾಡಿ, ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಹೆಚ್ಚಳಕ್ಕೆ ವಿಶೇಷ ಮಾರ್ಗಸೂಚಿಯನ್ನು ತಯಾರಿಸುವ ಉದ್ದೇಶ ಈ ಶಿಬಿರದಿಂದ ಈಡೇರಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಿಆರ್‍ಸಿ, ಶಿಕ್ಷಣ ಸಂಯೋಜಕಿ ಜಯಶ್ರೀ ಎ.ಪಿ, ಶಿಕ್ಷಕರು ವಿಷಯ ಕ್ಲಿಷ್ಟತೆಯನ್ನು ಪರಿಹರಿಸಿಕೊಂಡು ಸರಳ ಬೋಧನೆಗೆ ಪ್ರಯೋಜನ ಪಡೆಯಲು ಇಂತಹ ವಿಶೇಷ ಕಾರ್ಯಾಗಾರಗಳು ಸಹಕಾರಿಯಾಗಲ್ಲವು ಎಂದರು.

ಈ ವರ್ಷದ ಹತ್ತನೆ ತರಗತಿಯ ನೂತನ ಪ್ರಶ್ನೆ ಪತ್ರಿಕೆಯ ನೀಲನಕ್ಷೆ ತಯಾರಿಕೆ, ಪ್ರಶ್ನೆಕೋಟಿ ತಯಾರಿಕೆಗಳ ನೇತೃತ್ವವನ್ನು ಸಂಪನ್ಮೂಲ ತಜ್ಞ , ಜನತಾ ವಿದ್ಯಾಲಯ ಕಾಸರಕೋಡಿನ ವಿಜ್ಞಾನ ಶಿಕ್ಷಕ ಅಶೋಕ ಜೊಸೆಫ್ ವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ದೀವಗಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಯಾನಂದ ದೇಶಭಂಡಾರಿಯವರನ್ನು ಸಮಾಜ ವಿಜ್ಞಾನ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಗರಿಷ್ಠ ಫಲಿತಾಂಶ ಗಳಿಸಲು ಶಿಕ್ಷಕರು ಶಕ್ತಿಮೀರಿ ಶ್ರಮಿಸಬೇಕೆಂದು ಕರೆನೀಡಿದರು.

ಕಾರ್ಯಾಗಾರ ವೀಕ್ಷಿಸಲು ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾ, ಭೂಗೋಳ ಶಾಸ್ತ್ರದ ಬೋಧನಾ ತಂತ್ರಗಳನ್ನು ಹಾಗೂ ನಕಾಶೆ ಬಳಕೆಯ ಪ್ರಾಮುಖ್ಯತೆಯನ್ನು ವಿಶೇಷವಾಗಿ ತಿಳಿಸಿ, ಹತ್ತನೇ ತರಗತಿಯ ವಿದ್ಯಾರ್ಥಿಗಳ ಜೊತೆ ಅಧ್ಯಯನ ಕ್ರಮದ ಕುರಿತು ಸಂವಾದಿಸಿದರು. ಪ್ರಜ್ಞಾ ಆಚಾರಿ ಪ್ರಾರ್ಥಿಸಿದರು. ಶಿಕ್ಷಕ ಪ್ರದೀಪ ನಾಯ್ಕ ಸ್ವಾಗತಿಸಿದರು. ಶಿಕ್ಷಕ ದೇವಾನಂದ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಚ್.ಟಿ.ತಳ್ಳಳ್ಳಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ ನಾಯ್ಕ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.