ಅಶೋಕ ಹಾಸ್ಯಗಾರರಿಗೆ ಮುಂಬಯಿಯ ಸೂರಿ ಪ್ರಶಸ್ತಿ


ಶಿರಸಿ: ಮುಂಬಯಿಯ ಹವ್ಯಕ ಸಂಘವು ನೀಡುವ ಪ್ರತಿಷ್ಟಿತ ಕರ್ಕಿ ವೆಂಕಟರಮಣ ಶಾಸ್ತ್ರೀ ಸೂರಿ ಪ್ರಶಸ್ತಿಯು ಈ ಬಾರಿ ಇಲ್ಲಿನ ಹಿರಿಯ ಪತ್ರಕರ್ತ, ಜನಮಾಧ್ಯಮ ದೈನಿಕದ ಸಂಪಾದಕ ಅಶೋಕ ಹಾಸ್ಯಗಾರ ಅವರಿಗೆ ಪ್ರಕಟಿಸಲಾಗಿದೆ.

ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕುವರೆ ದಶಕಗಳ ಕಾಲ ಸಲ್ಲಿಸಿದ ಸೇವೆ ಹಾಗೂ ಸಾಧನೆಗೆ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಯಕ್ಷಗಾನ, ಕಾವ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಆಸಕ್ತಿ ಉಳಿಸಿಕೊಂಡು ಕೆಲಸ ಮಾಡುತ್ತಿರುವ ಹಾಸ್ಯಗಾರ ಅವರು ಮೂಲತಃ ಹೆಗ್ಗರಣಿ ಸಮೀಪದ ಹುಕ್ಲೀ ನಾಭಿಪುರಂದವರು. ಪತ್ರಿಕೋದ್ಯಮಕ್ಕೆ 1978ರಲ್ಲೇ ಪಾದಾರ್ಪಣೆ ಮಾಡಿದ ಅಶೋಕ ಹಾಸ್ಯಗಾರ ಅವರು, ಉದಯವಾಣಿ, ಸಂಯುಕ್ತ ಕರ್ನಾಟಕ, ನವನಾಡು ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿ, ಕರಾವಳಿ ಮುಂಜಾವು, ಲೋಕಧ್ವನಿ, ಪ್ರಸ್ತುತ ಜನಮಾಧ್ಯಮ ದೈನಿಕದಲ್ಲಿ ಸಂಪಾದಕರಾಗಿ ಕಾರ್ಯ ಮಾಡುತ್ತಿದ್ದಾರೆ.

ಈಗಾಗಲೇ ಎರಡು ಮುಖ, ಕವಿಯೆಡೆಗೆ ಬಂದ ಕವಿತೆ ಕವನ ಸಂಕಲನ ಕೃತಿಗಳ ಜೊತೆಗೆ ತುಡುಗಣಿ ತಾಳಮದ್ದಲೆ ಪರಂಪರೆ, ಹೂತನ ನೂತನ, ಪರಿಸರ ತಂತ್ರ ಸೇರಿದಂತೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಕಾರವಾರದ ರವೀಂದ್ರ ಠಾಗೋರ, ಶಿರಸಿಯ ಮಾಧ್ಯಮ ಶ್ರೀ, ಸಾಹಿತ್ಯ ಸಮ್ಮೇಳನ ಪುರಸ್ಕಾರಗಳು ಸೇರಿದಂತೆ ಅನೇಕ ಪ್ರಶಸ್ತಿಗಳೂ ಸಂದಿವೆ. ಕವಿಯೆಡೆಗೆ ಬಂದ ಕವಿತೆ ಕವನ ಸಂಕಲನಕ್ಕೆ ಮೈಸೂರಿನ ಎಚ್.ಎಸ್.ಕೆ ಪ್ರಶಸ್ತಿ ಕೂಡ ಬಂದಿತ್ತು. ಫೆ.23ರಂದು ಮುಂಬಯಿಯಲ್ಲಿ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.