ಗೋಕರ್ಣದಲ್ಲಿ ಡಿ.5 ರಿಂದ ಸಮಾವೇಶ: ವಿಶ್ವನಾಥ ಗೋಕರ್ಣ


ಗೋಕರ್ಣ: ಗೋಕರ್ಣ ಮೂಲದವರಾಗಿದ್ದು, ಪ್ರಸುತ್ತ ಹೊರ ರಾಜ್ಯ, ದೇಶಗಳಲ್ಲಿ ವಾಸಿಸುವವರು ತಮ್ಮ ಜನ್ಮ ಭೂಮಿಯಲ್ಲಿ ಪುನಃ ಒಂದುಗೊಡಿ, ಪುಣ್ಯ ಕ್ಷೇತ್ರದ ಆಚಾರ ವಿಚಾರಗಳ ಪರಿಚಯ ಮತ್ತು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆಗಳ ಭೇಟಿ ಅಲ್ಲಿನ ಸ್ಥಿತಿಗತಿ ಅವಲೋಕಿಸುವುದರ ಜೊತೆ ಹುಟ್ಟೂರಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿವಿಧ ಯೋಜನೆ ತಯಾರಿಸುವುದು ಎನ್. ಆರ್ ಜಿ.(ನಾನ್ ರೆಸಿಡೆಂಟ್ ಗೋಕರ್ಣಿಯನ್)ಪರಿವಾರದ ಮೂಲ ಉದ್ದೇಶವಾಗಿದ್ದು, ಇದರ ಸಲುವಾಗಿ ಡಿ.5 ರಿಂದ 7 ರವರೆಗೆ ಮೂರು ದಿನಗಳಕಾಲ ಸಂಸ್ಕೃತಿ ರೆಸಾರ್ಟನಲ್ಲಿ ಭವ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಎನ್. ಆರ್. ಜಿ. ಪರಿವಾರದ ಅಧ್ಯಕ್ಷ ಹಾಗೂ ಉತ್ತರ ಭಾರದ ಖ್ಯಾತ ಪತ್ರಿಕೆ ದೈನಿಕ ಜಾಗರಣ ಪತ್ರಿಕೆ ಸಂಪಾದಕ ವಿಶ್ವನಾಥ ಗೋಕರ್ಣ ಹೇಳಿದರು.

ಅವರು ಇಲ್ಲಿನ ಮೇಲಿನಕೇರಿಯಲ್ಲಿರುವ ಕಲಾವಿದ ರವಿ ಗುನಗರ ಆರ್ಟ ಗ್ಯಾಲರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ. 5 ರಂದು ಕಾರ್ಯಕ್ರಮವನ್ನು ಗೋಕರ್ಣ ಮೂಲದವರಾದ ಹಾಲಿ ಉತ್ತರ ಪ್ರದೇಶ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ನಿತಿನ್ ರಮೇಶ ಗೋಕರ್ಣ ಉದ್ಘಾಟಿಸಲಿದ್ದಾರೆ. ನಂತರ ಗೋಕರ್ಣದಲ್ಲಿ ಕಲಿತ ಶಾಲೆಗಳ ಭೇಟಿ ಅಲ್ಲಿನ ಸ್ಥಿತಿಗತಿ ಅಧ್ಯಯನ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾಯಕ್ರಮದ ಅಂಗವಾಗಿ ಹಾಲಕ್ಕಿ ಒಕ್ಕಲಿಗರ ಜಾನಪದ ಕಲೆ ಗುಮಟೆ ಪಾಂಗ ನಡೆಯಲಿದೆ.

ಡಿ. 6ರಂದು ಅಂತರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದೆ ಮೂಲ ಗೋಕರ್ಣದವರಾದ ಶ್ರೀಲಿಲಾ ಗೋಕರ್ಣರವರಿಂದ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ನಟ ದಿ. ಶಂಕರನಾಗ ಜೊತೆ ಕೆಲಸ ಮಾಡಿದ ಚಲನ ಚಿತ್ರ ಉದ್ಯಮಿ ಶಶಿಧರ ಭಟ್ ಉಪಸ್ಥಿತರಿರಲಿದ್ದಾರೆ. ನಂತರ ಗೋಕರ್ಣದ ಮೂಲಭೂತ ಸೌಕರ್ಯಗಳ ಕೊರತೆ ಅದನ್ನು ಬಗೆಹರಿಸುವ ದೃಷ್ಟಿಯಲ್ಲಿ ಸಹಾಯ ರೂಪರೇಷೆ ಕುರಿತು ಚರ್ಚೆ ಇಲ್ಲಿ ಊರಿನ ಹಿರಿಯರ ಸಲಹೆ ಸೂಚನೆ ಪಡೆಯಲಾಗುತ್ತೆ ಎಂದರು. ಸಂಜೆ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ, ನಂತರ ನೃತ್ಯ ವಿದುಷಿ ಸಹನಾ ಮಯ್ಯರವ ಒಡಿಸ್ಸಿ ನೃತ್ಯ ನಡೆಯಲಿದೆ.

ಕೊನೆಯ ದಿನ ಪುರಾಣ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ, ಪೂಜೆ ನೆರವೇರಿಸಿ ಸಮಾರಂಭ ಕೊನೆಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎನ್. ಆರ್. ಜಿ.ಪರಿವಾರದ ಸುರೇಶ ಗಿರಿಯನ್, ಅಮಿತ ನಾಡಕರ್ಣಿ, ರವಿ ಗುನಗ, ಗಣಪತಿ ಅಡಿ, ಕೃಷ್ಣಮೂರ್ತಿ ಶೇಟ್, ಗಿರೀಶ ಕಾಮತ್ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.