ಸಂವಿಧಾನದ ಚೌಕಟ್ಟಿನಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ: ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯ್ಕ

ಕುಮಟಾ: ದೇಶದ ಸಂವಿಧಾನ ನಮಗೆ ನೀಡಿದ ಮೂಲಭೂತ ಹಕ್ಕುಗಳು ಹಾಗೂ ನಿಯಮಗಳ ಚೌಕಟ್ಟಿನಲ್ಲಿಯೇ ಪ್ರತಿಯೊಬ್ಬ ನಾಗರಿಕನೂ ನಡೆಯಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯ್ಕ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ವಕೀಲರ ಸಂಘ ಹಮ್ಮಿಕೊಂಡ ವಕೀಲರ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಏಡ್ಸ್ ವಿರೋಧಿ ದಿನದ ಪ್ರಯುಕ್ತ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಏಡ್ಸ್ ಪೀಡಿತರನ್ನು ಸಮಾಜದಲ್ಲಿ ಅಸ್ಪ್ರಷ್ಯರಂತೆ ಕಾಣುವುದು ಸರಿಯಾದ ಕ್ರಮವಲ್ಲ. ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದ ಎಚ್.ಐ.ವಿ ವ್ಯಾಪಕವಾಗಿ ಹರಡುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ಏಡ್ಸ್ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಎಚ್.ಐ.ವಿ ಲಕ್ಷಣಗಳು ಹಾಗೂ ಅದರ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಾಲೂಕಾ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಶ್ರೀನಿವಾಸ ನಾಯಕ ಉಪನ್ಯಾಸ ನೀಡಿ, ತಾಲೂಕಿನಲ್ಲಿ 316 ಮಂದಿ ಎಚ್.ಐ.ವಿ ಸೊಂಕಿತರಿದ್ದು, ಇವರಲ್ಲಿ 225 ಮಂದಿ ಮಾತ್ರ ತಾಲೂಕಾ ಆಸ್ಪತ್ರೆಯಿಂದ ಆಂಟಿ ರೆಟ್ರೋವೈರಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರು ಕಾರವಾರದ ಎಆರ್‌ಟಿ ಕೇಂದ್ರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆ ಏಡ್ಸ್ ಪೀಡಿತರಿಗೆ ಚಿಕಿತ್ಸೆಯೇ ಇಲ್ಲದೇ ನರಳಾಡುವ ಪರಿಸ್ಥಿತಿಯಿತ್ತು. ಆದರೆ ಇಂದು ಬಿ.ಪಿ ಹಾಗೂ ಶುಗರ್ ರೋಗಿಗಳಂತೆ ಏಡ್ಸ್ ಪೀಡಿತರು ನಿರಂತರ ಔಷಧಗಳಿಂದ ಸಹಜವಾದ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಒಂದು ಮಟ್ಟಕ್ಕೆ ಏಡ್ಸ್ ರೋಗದ ಮೇಲೆ ಹತೋಟಿ ಸಾಧಿಸಿದಂತಾಗಿದೆ. ಆದರೆ ಇತ್ತೀಚೀನ ದಿನಗಳಲ್ಲಿ ಡ್ರಗ್ಸ್ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದಾಗಿ ಕೆಲವು ರಾಜ್ಯಗಳಲ್ಲಿ ಏಡ್ಸ್‌ನ ಸೋಂಕು ಅಧಿಕಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಧಾನ ನ್ಯಾಯಾಧೀಶ ವಿಘ್ನೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶೆ ಮೋಹನಕುಮಾರಿ ಎನ್.ಬಿ, ಸಿಪಿಐ ಪರಮೇಶ್ವರ ಗುನಗಾ, ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ನಾಯ್ಕ, ಆರ್.ಜಿ.ನಾಯ್ಕ, ಹಿರಿಯ ನ್ಯಾಯವಾದಿಗಳಾದ ಎಚ್.ವಿ.ಹೆಗಡೆ, ಎನ್.ಕೆ.ಶಾನಭಾಗ, ಅಶೋಕ ನಾಯ್ಕ, ಆನಂದ ನಾಯಕ, ವಿದ್ಯಾ ಜೋಶಿ, ಬಿ.ಎಸ್.ಉಮಾನಂದ ಎಂ.ಡಿ.ರಫೀಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಕೀಲರಾದ ವೆಂಕಟೇಶ ಗೌಡ ಸ್ವಾಗತಿಸಿದರು. ಶ್ರೀನಿವಾಸ ನಾಯ್ಕ ನಿರೂಪಿಸಿ, ವಂದಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.