ಭೀಮಣ್ಣ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ: ಮಾಜಿ ಸಚಿವ ಆರ‍್ವಿಡಿ


ಶಿರಸಿ: ಕಳೆದ 10 ದಿನಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರೂ, ಹೊಸ ಅಭಿವೃದ್ಧಿ ಯಾವುದೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಸಚಿವ, ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ ಆರ್.ವಿ.ದೇಶಪಾಂಡೆ ಹೇಳಿದರು.

ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಸುಮಾರು 10 ರಿಂದ 13 ಸಾವಿರ ಅಂತರದಿಂದ ಗೆಲುವು ಸಾಧಿಸಲಿದ್ದೇವೆ ಎಂದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಪಕ್ಷಾಂತರ ಮಾಡಿದ್ದಾರೋ ಅವರು ಸೋತಿದ್ದಾರೆ. ಆ ಗಾಳಿ ಇಂದು ಕರ್ನಾಟಕದಲ್ಲಿ ಬೀಸುತ್ತಿದೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು. ಅನರ್ಹ ಶಾಸಕರು ಪ್ರಜಾ ಪ್ರಭುತ್ವದಲ್ಲಿ ಮಾರಕರು ಎಂದರು.ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮೀಷಕ್ಕೆ ಒಳಗಾಗಬಾರದು ಎಂದರು.

ಉಪ ಚುನಾವಣೆಯಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸುತ್ತದೆ. ಸ್ಥಿರ ಸರ್ಕಾರ ಕೊಡಲು ಶಕ್ತಿ ಇದ್ದರೆ ಸರ್ಕಾರ ರಚನೆ ಮಾಡಬೇಕು. ಕೇವಲ ಚೀಫ್ ಮಿನಿಸ್ಟರ್ ಮಂತ್ರಿ ಮಾಡಲು ಸರ್ಕಾರ ಆಗಬಾರದು. ಚುನಾವಣೆ ನಂತರ ಕಾಂಗ್ರೆಸ್ ಜೆಡಿಎಸ್ ಹೆಚ್ಚು ಸ್ಥಾನ ಬಂದಲ್ಲಿ ಸ್ಥಿರ ಸರ್ಕಾರ ಮಾಡಲು ಶಕ್ತಿ ಇದ್ದರೆ ಮಾಡಬೇಕು ಇಲ್ಲವಾದರೆ ಚುನಾವಣೆಗೆ ಹೋಗಬೇಕು ಎಂದರು.

ಇನ್ನು ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವರಾಮ್ ಹೆಬ್ಬಾರ್ ಹೆಸರು ಹೇಳಿ ಮತ ಯಾಚಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದರಲ್ಲಿ ಯಾವ ಹುರುಳೂ ಇಲ್ಲ. ಯಾವುದೇ ಆರೋಪ ಇದ್ರೂ ಹೇಳಲಿ. ನಿಮ್ಮ ಬಳಿ ದಾಖಲೆ ಇರಬೇಕು ದಾಖಲೆ ಇದ್ದರೆ ತೋರಿಸಲಿ. ದಾಖಲೆ ಇಲ್ಲದೇ ಬೇಜವಬ್ದಾರಿ ಮಾತನಾಡಬಾರದು ಎಂದರು.

22 ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಳಾಗಿದೆ. ಅಡಿಕೆ, ಭತ್ತ, ಶುಂಠಿ, ಬಾಳೆ, ಹತ್ತಿ ನಷ್ಟವಾಗಿ ಸಾವಿರಾರು ಕೋಟಿ ನಷ್ಟವಾಗಿದೆ. ಆದರೆ ಪರಿಹಾರ ಬಿಡುಗಡೆ ಆಗಿಲ್ಲ. ಯಾರೊಬ್ಬರಿಗೂ ಬೆಳೆ ಪರಿಹಾರ ಬಂದಿಲ್ಲ. ಸರ್ಕಾರ ಉಳಿಸುವ ಪ್ರಯತ್ನದಲ್ಲಿ ಆಡಳಿತ ಸ್ಥಗಿತಗೊಂಡಿದೆ. ರೈತರಿಗೆ, ಬಡವರಿಗೆ, ಕೂಲಿಕಾರರಿಗೆ ಸಹಾಯ ಆಗುತ್ತಿಲ್ಲ. ಬಜೆಟ್ ನಲ್ಲಿ ಹಣ ಇದ್ದರೂ ಸಾಲಮನ್ನಾಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿ.ಎಫ್.ನಾಯ್ಕ, ದೀಪಕ ದೊಡ್ಡುರು, ಸುನೀಲ್ ನಾಯ್ಕ, ಜಗದೀಶ ಗೌಡ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.