ಪರಿಸರದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು: ಸೀತಾರಾಮ ಶೆಟ್ಟಿ

ಕುಮಟಾ: ಪರಿಸರ ಸಂರಕ್ಷಣೆಯ ಜೊತೆಗೆ ಅಂತರ್ಜಲಮಟ್ಟ ಅಧಿಕಗೊಳಿಸಲು ಶೇ.50 ರಷ್ಟು ನೀರನ್ನು ಭೂಮಿಯಲ್ಲಿ ಇಂಗಿಸಲು ಪ್ರತಿಯೊಬ್ಬನೂ ಪ್ರಯತ್ನಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆಯಲ್ಲಿ ಮಣಿಪಾಲಿನ ಭಾರತೀಯ ವಿಕಾಸ ಟ್ರಸ್ಟ್, ಹೊನ್ನಾವರದ ಸಂಗಮ ಸೇವಾ ಸಂಸ್ಥೆ, ಹಿರೇಗುತ್ತಿಯ ಸ್ಪಂದನ ಫೌಂಡೇಶನ್ ಹಾಗೂ ಇಕೋಕ್ಲಬ್ ವಿಜ್ಞಾನ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಳೆನೀರು ಕೊಯ್ಲು, ಸೌರ ವಿದ್ಯುತ್ ಹಾಗೂ ಔಷಧಿ ಸಸ್ಯಗಳ ಮಾಹಿತಿ ಕುರಿತು ನಡೆಸಿದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಭಾರತೀಯ ವಿಕಾಸ ಟ್ರಸ್ಟ್ ವ್ಯವಸ್ಥಾಪಕ ಮನೋಹರ ಕಟಗೇರಿ ಮಾತನಾಡಿ, ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ ಪರ್ಯಾಯ ಇಂಧನದ ಅವಶ್ಯಕತೆಯಿದೆ. ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ, ಬರಿದಾಗುವ ಇಂಧನಗಳಿಂದ ದೂರವಿದ್ದು, ಸೋಲಾರ್ ಶಕ್ತಿಯನ್ನು ಅಧಿಕವಾಗಿ ಬಳಸಬೇಕು ಎಂದರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ಎಂ ರಾವ್ ಮಾತನಾಡಿ, ನಮ್ಮ ಮನೆಯ ಸುತ್ತಮುತ್ತಲಿನಲ್ಲಿರುವ ಗಿಡಗಳ ಕುರಿತು ಮತ್ತು ಅವುಗಳ ಉಪಯೋಗದ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಮಾತನಾಡಿ, ಇಂದಿನ ದಿನದಲ್ಲಿ ಮಳೆನೀರು ಕೊಯ್ಲು ಅತ್ಯಂತ ಪರಿಣಾಮಕಾರಿಯಾಗಿದೆ. ಸೋಲಾರ್ ಶಕ್ತಿಯನ್ನು ಬಳಸಿ ಇಂಧನವನ್ನು ಉಳಿಸಿಸಬೇಕು. ನಮ್ಮ ಹಿತ್ತಲ ಗಿಡಗಳ ಔಷಧಿ ಗುಣವಿರುವ ಸಸ್ಯಗಳನ್ನು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಎನ್ ರಾಮು ಹಿರೇಗುತ್ತಿ ಪ್ರಾಸ್ತಾವಿಕ ಮಾತನಾಡಿ, ನೀರಿನ ಅಭಾವದಿಂದ ತತ್ತರಿಸಿದ ನಮಗೆ ಮಳೆ ನೀರು ಕೊಯ್ಲು ವರದಾನ. ಜೀವರಾಶಿಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಮಣ್ಣು ಮತ್ತು ನೀರಿನ ವೈಜ್ಞಾನಿಕ ಸಂರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿದರು.

ಸಂಗಮ ಸೇವಾ ಸಂಸ್ಥೆಯ ರವೀಂದ್ರ ಶೆಟ್ಟಿ, ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ, ನಾಗರಾಜ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಸಹನಾ ಗಾಂವಕರ ನಿರೂಪಿಸಿದರು. ಶಿವರಾಜ ನಾಯಕ ಸ್ವಾಗತಿಸಿದರು. ಶ್ರೀದೇವಿ ಹಳ್ಳೇರ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.