ಪ್ರಸಿದ್ಧ ತಬಲಾ ವಾದಕ ಮುಕುಂದ್ ಭಾಲೆಯವರಿಗೆ ‘ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ’

ಕುಮಟಾ: ಸ್ಥಳೀಯ ಸಂಗೀತ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಅವರು, ಸಂಗೀತ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೋತ್ಸಾಹಿಸಬೇಕು ಎಂದು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅಭಿಪ್ರಾಯಪಟ್ಟರು.

ತಾಲೂಕಿನ ಕೂಜಳ್ಳಿಯಲ್ಲಿ ದಿವಂಗತ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಆಯೋಜಿಸಿದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ತಬಲಾ ವಾದಕ ಮುಕುಂದ್ ಭಾಲೆ ಅವರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿ, ಅವರು ಮಾತನಾಡಿದರು.

ಸಂಗೀತಕ್ಕೆ ಜಾತಿ, ಧರ್ಮದ ಗಡಿ ಇಲ್ಲದಿರುವುದರಿಂದ ಮಾನವ ಕಲ್ಯಾಣಕ್ಕೆ, ದೇಶದ ಏಕತೆಗೆ, ಮನಸ್ಸಿನ ನೆಮ್ಮದಿಗೆ ಅತ್ಯವಶ್ಯಕ ಎಂದ ಅವರು, ಸಂಗೀತ ಕಲಿತ ಹೆಣ್ಣು ಮಕ್ಕಳು ಮನೆಯಲ್ಲಿ ಬಹಳ ಸೊಗಸಾಗಿ ಹಾಡುತ್ತಿದ್ದರೆ ಅದುವೇ ಸ್ವರ್ಗ. ಕರ್ನಾಟಕ ಸಂಗೀತಕ್ಕೆ ಧಾರವಾಡದ ಕಲಾವಿದರು ನೀಡಿದ ಕೊಡುಗೆ ಅನನ್ಯವಾದುದ್ದು. ಹಿಂದೆ ನನ್ನ ಸಂಸದ ನಿಧಿಯಿಂದ ಅಂಧ ಮಕ್ಕಳ ಸಂಗೀತ ಶಾಲೆಗೆ ನೆರವು ನೀಡಿದ್ದೇನೆ. ನಮ್ಮ ತಾಲೂಕಿನವರೇ ಆದ ಪಂಡಿತ್ ಷಡಕ್ಷರಿ ಗವಾಯಿ ಅವರು, ಇಲ್ಲಿ ಕಂಡ ಸಾರ್ಥಕ ಬದುಕಿಗೆ ಸಾಕ್ಷಿಯಾಗಿ ಅವರ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡುತ್ತಿರುವುದು ವಿಶೇಷದ ಸಂಗತಿ. ತಬಲಾ ಕಲೆಯಲ್ಲಿ ನಾನೊಬ್ಬ ಸಾಧಾರಣ ವಿದ್ಯಾರ್ಥಿ. ನಾನೊಬ್ಬ ಸಂಗೀತದ ಮೊದಲ ತರಗತಿಯ ವಿದ್ಯಾರ್ಥಿ ಎಂದು ಭಾವಿಸಿ ನನ್ನ ತಬಲಾ ವಾದನ ಆಲಿಸಿ ಎಂದರು.

ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ, ಷಡಕ್ಷರಿ ಗವಾಯಿ ಅವರ ಪ್ರತಿಭೆಯನ್ನು ರಾಷ್ಟ್ರಮಟ್ಟಕ್ಕೆ ಏರಿಸಿದ ಗೌರವ ಕೂಜಳ್ಳಿಯ ಗವಾಯಿ ಅಕಾಡೆಮಿಗೆ ಸಲ್ಲುತ್ತದೆ ಎಂದರು. ಇಡಗುಂಜಿ ದೇವಾಲಯ ಧರ್ಮದರ್ಶಿ ಡಾ.ಜಿ.ಜಿ. ಸಭಾಹಿತ, ಹಿಂದೆ ಷಡಕ್ಷರಿ ಗವಾಯಿ ಅವರು ಭಟ್ಕಳದಿಂದ ಕಾರವಾರದವರೆಗೆ ಪಿಯಾನೋ ಹಿಡಿದು ಸಂಗೀತಾಸಕ್ತರ ಮನೆ, ಮನೆಗೆ ತೆರಳಿ ಸಂಗೀತ ಕಲಿಸಿದ್ದಾರೆ ಎಂದರು.

ರಂಗಕರ್ಮಿ ಕಿರಣ ಭಟ್ಟ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‍ನ ಅತಿಯಾದ ಬಳಕೆಯಿಂದ ಹಾಳಾಗುತ್ತಿದ್ದಾರೆ ಎಂದು ಆಕ್ಷೇಪಿಸುವ ನಾವು, ಅವರನ್ನು ಸಂಗೀತದ ಸೆಳೆತಕ್ಕೆ ಸಿಲುಕಿಸಲು ಸೋಲುತ್ತಿದ್ದೇವೆ ಎಂದರು.

ಷಡಕ್ಷರಿ ಗವಾಯಿ ಆಕಾಡೆಮಿ ಅಧ್ಯಕ್ಷ ವಸಂತ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಅನಿಲ ಹೆಗಡೆ ಮಾತನಾಡಿದರು. ಕೂಜಳ್ಳಿ ಸ್ವರ ಸಂಗಮದ ಅಧ್ಯಕ್ಷ ಹಾಗೂ ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ, ಗೌರೀಶ ಯಾಜಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ರಘುಪತಿ ಯಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ರಾಜು ಲಮಾಣಿ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.