ಶಿಕ್ಷಣದಲ್ಲಿ ಮಾನಸಿಕ ಸ್ಥಿರತೆ ಅವಶ್ಯಕ: ಪ್ರೊ.ಎಸ್.ಎನ್.ಹೆಗಡೆ

ಕುಮಟಾ: ಶೈಕ್ಷಣಿಕ ಕ್ಷೇತ್ರದಲ್ಲಿ ಮಾನಸಿಕ ಸ್ಥಿರತೆ ಅವಶ್ಯಕವಾಗಿದೆ. ಸಾಮಾಜಿಕ ಬದಲಾವಣೆಯಾದಂತೆ ಮಾನಸಿಕ ದೃಢತೆಯ ಕುರಿತಾದ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬಹುದಾಗಿದೆ ಎಂದು ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಪ್ರೊ.ಎಸ್.ಎನ್.ಹೆಗಡೆ ಅಭಿಪ್ರಾಯಪಟ್ಟರು.

ಜಿ.ಪಂ.ಉತ್ತರಕನ್ನಡ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಎ.ವಿ.ಬಾಳಿಗಾ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕರಾವಳಿ ತಾಲೂಕಿನ ಕಾಲೇಜುಗಳ ಪ್ರಾಚಾರ್ಯರು ಮತ್ತು ವಸತಿ ನಿಲಯದ ಮೇಲ್ವಿಚಾರಕರಿಗಾಗಿ ಬುಧವಾರ ನಡೆದ ಅರಿವು ಕಾರ್ಯಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಚಿಕ್ಕಚಿಕ್ಕ ವಿಚಾರ, ವೈಮನಸ್ಸಿಗೆ ಸಂಬಂಧಿಸಿದಂತೆ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಬೇಸರದ ಸಂಗತಿ. ಆತ್ಮಹತ್ಯೆ ತಡೆಗಟ್ಟುವಲ್ಲಿ ಇಂತಹ ಕಾರ್ಯಕ್ರಮ ಪ್ರಯೋಜನ ಕಾರಿಯಾಗಿದ್ದು, ಪ್ರತಿಯೋಬ್ಬ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಪ್ರಭಾರಿ ಉಪನಿರ್ದೇಶಕ ಹಾಗೂ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಮಾತನಾಡಿ, ಇತ್ತಿಚಿನ ದಿನದಲ್ಲಿ ವಿದ್ಯಾರ್ಥಿಗಳು ಅಧಿರರಾಗುತ್ತಿರುವದು ಹೆಚ್ಚಾಗತೊಡಗಿದೆ. ಅಂತಹ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬ ಶಿಕ್ಷಕರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸರ್ವೆಶ ಕುಮಾರ ಉಪನ್ಯಾಸ ನೀಡಿ, ಆತ್ಮ ಹತ್ಯೆ ಮಾಡಿಕೊಳ್ಳುವಂತ ವಿದ್ಯಾರ್ಥಿಗಳಲ್ಲಿ 3 ವಿಧವಿದೆ. ಸಾಮಾನ್ಯ ಮನಸ್ಥಿತಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಉಪನ್ಯಾಸಕರೇ ಬಗೆಹರಿಸಬಹುದು. ಅಸಮಾನ್ಯ ಎನಿಸಿದ ವಿದ್ಯಾರ್ಥಿಗಳಿಗೆ ವೈದ್ಯರ ಮೂಲಕ ಕೌನ್ಸ್‍ಲಿಂಗ್ ಮಾಡಿಸಲೇಬೇಕು. ಮಾನಸಿಕ ಅಧಿರತೆ ಇರುವ ವಿದ್ಯಾರ್ಥಿಗಳನ್ನು ಪ್ರತಿ ವಿದ್ಯಾಲಯದಲಿಯೂ ಗುರುತಿಸುವ ಕೆಲಸವಾಗಬೇಕು. ಮಕ್ಕಳ ಪಾಲಕರು ಕಾಲೇಜು ಉಪನ್ಯಾಸಕರೊಂದಿಗೆ ಸಹಕರಿಸಿ, ತಮ್ಮ ಮಕ್ಕಳ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಮಾನಸಿಕ ಅಧರ್ಯದ ವಿದ್ಯಾರ್ಥಿಗಳನ್ನು ಗುರುತಿಸುವ ತಾಂತ್ರಿಕ ಮಾಹಿತಿಯನ್ನು ಅವರು ನೀಡಿದರು.

ವೇದಿಕೆಯಲ್ಲಿ ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಜಿ.ಹೆಗಡೆ, ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ, ಕವಲಕ್ಕಿ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಜಿ.ಭಟ್ಟ ಉಪಸ್ಥಿತರಿದ್ದರು. ಪ್ರಾಚಾರ್ಯ ಎನ್.ಜಿ.ಹೆಗಡೆ ಸ್ವಾಗತಿಸಿದರು. ರಾಜೇಶ್ವರಿ ಭಟ್ಟ ಮತ್ತು ಹರ್ಷಿಣಿ ಹೆಗಡೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಮಹೇಶ ಭಟ್ಟ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.