ಪಾತ್ರಾಪಾತ್ರವಿವೇಕೋಸ್ತಿ ಧೇನುಪನ್ನಗಯೋರಿವ
ತೃಣಾತ್ಸಂಜಾಯತೇ ಕ್ಷೀರಂ ಕ್ಷೀರಾತ್ಸಂಜಾಯತೇ ವಿಷಮ್ ||
ಯಾವುದನ್ನು ಯಾರಿಗೆ ಕೊಡಬೇಕು ಅನ್ನುವುದಕ್ಕೆ ಪಾತ್ರಾಪಾತ್ರವಿವೇಕ ಎಂದು ಹೆಸರು. ಯಾರಿಗೆ ಯಾವುದನ್ನು ಕೊಡುತ್ತೇವೆ ಅನ್ನುವುದರ ಆಧಾರದಮೇಲೆ ಆ ವಸ್ತು ಏನಾಗಿ ಪರಿಣಮಿಸುತ್ತದೆ ಅನ್ನುವುದು ನಿರ್ಧಾರವಾಗುತ್ತದೆ. ಅದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಹಸು ಮತ್ತು ಹಾವು. ಯಃಕಶ್ಚಿತ್ ಹುಲ್ಲನ್ನು ತಿಂದು ಆಕಳು ಅಮೃತತುಲ್ಯವಾದ, ಜೀವಪೋಷಕವಾದ, ಸವಿಯಾದ ಹಾಲನ್ನು ಕೊಡುತ್ತದೆ. ಅಂದರೆ ಹುಲ್ಲನ್ನೂ ಹಾಲಾಗಿ ಪರಿವರ್ತಿಸುವ ಪಾತ್ರತೆ ಆಕಳಿನದು. ಅದೇ ಅಮೃತತುಲ್ಯವಾದ ಹಾಲನ್ನು ಹಾವಿಗೆರೆದರೆ ಅದು ಇನ್ನೂ ಶ್ರೇಷ್ಠವಾದ ಇನ್ನೇನನ್ನೋ ಕೊಡುವುದರ ಬದಲಿಗೆ ಜೀವಮಾರಕವಾದ ವಿಷವನ್ನೇ ಕೊಡುತ್ತದೆ.
ಅದು ಹಾವಿನ ಪಾತ್ರತೆ. (ಪ್ರಕೃತಿಯಲ್ಲಿ ಮಾನವನ ಹೊಂದಿಕೆಯಾಗಬೇಕೆನ್ನುವ ಯಾವ ಉದ್ದೇಶಗಳೂ ಇಲ್ಲ. ಅದು ಅದರಷ್ಟಕೆ ಇದೆ. ಮಾನವನು ತನ್ನ ನೀತಿಗಳನ್ನು ಬಲಗೊಳಿಸಿಕೊಳ್ಳಲು ಬೇರೆ ಬೇರೆ ಉದಾಹರಣೆಗಳನ್ನು ಪ್ರಕೃತಿಯಿಂದ ಆಯ್ದುಕೊಳ್ಳುತ್ತಾನೆ ಅಷ್ಟೆ)
– ಶ್ರೀ ನವೀನ ಗಂಗೋತ್ರಿ