ಆತ ದಿವ್ಯಾಂಗ ಹುಡುಗಿಯ ಶಾಲಾ ಬ್ಯಾಗ್ ನಿತ್ಯ ಹೊರುತ್ತಿದ್ದ; ಆಕೆ ಸಾಯುವ ಮುನ್ನ ಅಂಗಿಯ ಗಿಪ್ಟ್ ಕೊಡುವಂತೆ ಅಮ್ಮನಿಗೆ ಹೇಳಿದ್ದಳು: ಇಲ್ಲಿದೆ ಮಕ್ಕಳ ಮನಕಲಕುವ ನೈಜಕಥೆ !


ಸ್ನೇಹದ ಬಂಧ ಆ ಇಬ್ಬರು ಮಕ್ಕಳನ್ನು ಬೆಸೆದಿತ್ತು. ಆ ಹುಡುಗ ನಿತ್ಯ ಶಾಲೆಗೆ ಬರುವಾಗ ಅಂಗವಿಕಲೆಯಾಗಿದ್ದ ಸ್ನೇಹಿತೆಯ ಮನೆಗೆ ಹೋಗಿ, ಆಕೆಯ ಸ್ಕೂಲ್ ಬ್ಯಾಗ್ ಹೊತ್ತುಕೊಂಡು, ಅವಳ ಕೈ ಹಿಡಿದು ಶಾಲೆಗೆ ಕರೆತರುತ್ತಿದ್ದ.

ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಪ್ರಾರ್ಥನಾ ಗೌಡ ಚಿಕ್ಕಂದಿನಿಂದಲೇ ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದಳು. ಆಕೆಯ ಆತ್ಮೀಯ ಸ್ನೇಹಿತನಾಗಿದ್ದ, ಅವಳದೇ ತರಗತಿಯ ನಿರಂಜನ ಕಬ್ಬೇರ, ಪ್ರತಿದಿನ ಶಾಲೆಗೆ ಬರುವಾಗ ಹಾಗೂ ಸಂಜೆ ತಿರುಗಿ ಮನೆಗೆ ಹೋಗುವಾಗ ಆಕೆಗೆ ಜೊತೆಯಾಗುತ್ತಿದ್ದ.

`ಪ್ರಾರ್ಥನಾ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ತಪಸ್ಸಿನಂತೆ ಮಾಡುತ್ತಿದ್ದ ನಿರಂಜನ, ಆಕೆಯ ಕೊನೆಯ ದಿನಗಳವರೆಗೂ ಇದನ್ನು ಮುಂದುವರಿಸಿದ. ಕೆಲ ತಿಂಗಳುಗಳ ಹಿಂದೆ ಆಕೆ ಅಸುನೀಗಿದಳು. ಅದಕ್ಕೂ ಮುನ್ನ ಆಕೆ, ಅಮ್ಮನ ಬಳಿ ನಿರಂಜನನಿಗೆ ಅಂಗಿ ಹೊಲಿಸಿಕೊಡು ಎಂದು ಕೋರಿಕೊಂಡು, ಅವಳ ಬಳಿಯಿದ್ದ ಕೆಲವು ವಸ್ತುಗಳನ್ನು ಅವನಿಗೆ ಗಿಫ್ಟ್ ಕೊಡುವಂತೆ ತಿಳಿಸಿದ್ದಳಂತೆ. ನಾಲ್ಕೈದು ದಿನ ಊಟ, ತಿಂಡಿ ಬಿಟ್ಟು ಕುಳಿತಿದ್ದ ನಿರಂಜನಿಗೆ ಈಗಲೂ ಪ್ರಾರ್ಥನಾ ನೆನಪು ಮಾತ್ರ ಹಸಿರಾಗಿದೆ’ ಎನ್ನುತ್ತಾರೆ ಶಿಕ್ಷಕ ಮಾರುತಿ ಉಪ್ಪಾರ್.

ಬಹುರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರಾರ್ಥನಾಗೆ ಎಲ್ಲರಂತೆ ನಡೆಯಲು ಬರುತ್ತಿರಲಿಲ್ಲ. ಅಂಗವಿಕಲರಿಗೆ ನೀಡುವ ವೀಲ್ಹ್ ಚೇರ್ ಅನ್ನು ಅವಳಿಗೆ ಕೊಟ್ಟಿದ್ದರು. ಆದರೆ, ಆಕೆ ತನಗಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಇನ್ನೊಬ್ಬಳು ವಿದ್ಯಾರ್ಥಿನಿಗೆ ಆ ಕುರ್ಚಿಯನ್ನು ಕೊಟ್ಟಿದ್ದಳು. ಪ್ರಾರ್ಥನಾಳಂತಹ ಅತ್ಯುತ್ತಮ ವಿದ್ಯಾರ್ಥಿನಿಯನ್ನು ಆ ಶಾಲೆ ಕಳೆದುಕೊಂಡಿದೆ. ಆದರೆ, ಆಕೆಯ ತ್ಯಾಗ, ಆದರ್ಶ ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ

Categories: ಹರಿತ ಲೇಖನಿ

Leave A Reply

Your email address will not be published.