ಡಿ.5 ರಂದು ಯಲ್ಲಾಪುರ ಉಪ ಚುನಾವಣೆ: ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿ: ಡಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿ. 5 ರಂದು ಮತದಾನ ನಡೆಯಲ್ಲಿದ್ದು, ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಈ ಹಿಂದೆ ಭಾರತ ಚುನಾವಣಾ ಆಯೋಗ ಘೋಷಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪುನಾರಂಭವಾಗಿದ್ದು ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿದೆ ಎಂದು ಅವರು ತಿಳಿಸಿದರು.

ನ.18 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ನ. 19ರಂದು ನಾಮಪತ್ರ ಪರಿಶೀಲನೆ ಹಾಗೂ ನ. 21ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿರುತ್ತದೆ. ಡಿ. 5ರಂದು ಗುರುವಾರ ಮತದಾನ ನಡೆಯಲಿದ್ದು ಡಿ. 9ರಂದು ಸೋಮವಾರ ಮತ ಎಣಿಕೆ ನಡೆಯಲಿದೆ. ಡಿ. 11ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಯಲ್ಲಾಪುರ, ಮುಂಡಗೋಡ ಹಾಗೂ ಸಿರಸಿ ತಾಲೂಕುಗಳು ಬರಲಿದ್ದು ಒಟ್ಟು 231 ಮತಗಟ್ಟೆಗಳು ಕ್ಷೇತ್ರದಲ್ಲಿ ಇರಲಿವೆ. ಮತದಾರರ ಅಂತಿಮ ಪಟ್ಟಿ ಹಾಗೂ 04-04-2019ರ ಉಪ ಅಂತಿಮ ಪಟ್ಟಿ ಪ್ರಕಟಣೆಯಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 87,899 ಪುರುಷ ಮತದಾರರು, 84,647 ಮಹಿಳಾ ಮತದಾರರು ಹಾಗೂ 1 ಇತರೆ ಒಟ್ಟು 1,72,547 ಮತದಾರರಿದ್ದು ಎಲ್ಲ ಮತದಾರರ ಭಾವಚಿತ್ರವುಳ್ಳ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ ಹಾಗೂ ಶೇಕಡಾ 100ರಷ್ಟು ಮತದಾರರ ಚೀಟಿಯನ್ನು ವಿತರಿಸಲಾಗಿದೆ. ಅಲ್ಲದೆ ಮತದಾನಕ್ಕೆ ಚುನಾವಣಾ ಆಯೋಗ ನಿಗದಿಪಡಿಸಿದ ಪರ್ಯಾಯ ದಾಖಲೆಗಳನ್ನು ಪುರಸ್ಕರಿಸಲಾಗುವುದು ಎಂದು ಅವರು ತಿಳಿಸಿದರು.

ಎಲ್ಲ 231 ಮತಗಟ್ಟೆಗಳಿಗೆ, ಗಾಳಿ ಬೆಳಿಕಿನ ವ್ಯವಸ್ಥೆ, ಕುಡಿಯುವ ನೀರು, ವಿಕಲಚೇತನ ಮತದಾರರ ಅನುಕೂಲಕ್ಕೆ ರ‍್ಯಾಂಪ್, ಶೌಚಾಲಯ ಸೇರಿದಂತೆ ಇತ್ಯಾದಿ ಕನಿಷ್ಠ ಮೂಲಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಯಲ್ಲಿರಲಿದ್ದು ಯಾವುದೇ ಚುನಾವಣೆ ಅಕ್ರಮಗಳು ನಡೆಯದಂತೆ ನಿಗಾವಹಿಸಲಾಗಿದೆ. ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದರು.

ಅಲ್ಲದೆ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚೆಕ್‌ಪೋಸ್ಟ್ ಗಳ ಜಮಾವಣೆ, ಶಸ್ತ್ರಸಜ್ಜಿತ ಪೊಲೀಸ್ ಪಡೆ ನಿಯೋಜನೆ, ಚುನಾವಣಾಧಿಕಾರಿ ಕಚೇರಿಯ ಸುತ್ತ 200 ಮೀಟರ್ ಪಾಸಲೆ 144 ನಿಷೇಧಾಜ್ಞೆ ಜಾರಿ, ಮತದಾನದ ದಿನ ಹಾಗೂ ಮತ ಎಣಿಕೆ ದಿನದಂದು ಮದ್ಯ ಮಾರಾಟ ನಿಷೇಧ ಸೇರಿದಂತೆ ಮುಂತಾದ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತ ಚುನಾವಣಾ ಅಯೋಗದ ಬಹು ನಿರೀಕ್ಷಿತ ಕಾರ್ಯಕ್ರಮ ಮತದಾರರ ಪಟ್ಟಿ ಪರಿಶೀಲನೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಿಲ್ಲೆಯ ಶೇ.98ರಷ್ಟು ಮತದಾರರು ತಮ್ಮ ದಾಖಲೆಯೊಂದಿಗೆ ಪಟ್ಟಿ ಪರಿಶೀಲನೆ ಮಾಡಿದ ಬಗ್ಗೆ ಜಿಲ್ಲೆ ದಾಖಲೆ ಮಾಡಿ ಯಶಸ್ವಿಯಾಗಿದೆ. ಇದರಿಂದ ತಪ್ಪಿಲ್ಲದ ಮತದಾರರ ಪಟ್ಟಿ ಸಿದ್ದವಾದಂತಾಗಿದೆ ಎಂದೂ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜು ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಜಿಲ್ಲಾದ್ಯಂತ 15 ಚೆಕ್‌ಪೋಸ್ಟ್ಗಳನ್ನು ರಚಿಸಲಾಗಿದೆ. ಮತಕ್ಷೇತ್ರದ ಗಡಿ ಜಿಲ್ಲೆಗಳಾದ ಧಾರವಾಡ, ಹಾವೇರಿ, ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಹಾಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಪೊಲೀಸ್ ಇಲಾಖೆ ಸನ್ನದ್ದವಾಗಿದೆ ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ್ ಎಂ.ಬ್ಯಾಕೋಡ್ ಪತ್ರಿಕಾಗೋಷ್ಠಿಯಲ್ಲಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.