ಕ್ಷೇತ್ರ ಅನಾಥವಾಗಿಲ್ಲ; 365ರೂ. ಕೋಟಿ ಅನುದಾನ-ಅನರ್ಹ ಶಾಸಕ ಹೆಬ್ಬಾರ್

ಶಿರಸಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದ 3 ತಿಂಗಳಲ್ಲಿ‌ ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗಾಗಿ 365 ಕೋಟಿ ರೂ. ಅನುದಾನ ತರಲಾಗಿದೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕ್ಷೇತ್ರ ಅನಾಥವಾಯಿತು ಎಂದು ಆರೋಪ ಮಾಡಿದ್ದಾರೆ. ಆದರೆ ಕಳೆದ 3 ತಿಂಗಳಲ್ಲಿ ದೊಡ್ಡ ನೀರಾವರಿ ಯೋಜನೆ ಸೇರಿದಂತೆ 365ಕೋಟಿ ರೂ. ಅಧಿಕ ಹಣವನ್ನು ತಂದಿದ್ದೇನೆ ಎಂದರು.
ರೂ. 225 ಕೋಟಿ ಬಿಡುಗಡೆ:
ಮುಂಡಗೋಡ ತಾಲೂಕಿನ ಮಳಗಿ, ಪಾಳಾ, ಕಾತೂರು, ಕೋಡಂಬಿ, ಓಣಿಕೇರಿ ಸೇರಿದಂತೆ 5 ಗ್ರಾಮ ಪಂಚಾಯತಗಳಲ್ಲಿ ಬರುವ 84 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ ಕೆರೆಗಳಿಗೆ  ಬೇಡ್ತಿ ನದಿಯಿಂದ ನೀರು ತುಂಬಿಸುವ ಬೃಹತ್ ಯೋಜನೆಗೆ ಬಿಜೆಪಿ ಸರ್ಕಾರದಿಂದ 225 ಕೋಟಿ ರೂ. ಬಿಡುಗಡೆಯಾಗಿದ್ದು, ಸುಮಾರು 8292ಎಕರೆ ಕೃಷಿ ಪ್ರದೇಶಗಳಿಗೆ ಇದರಿಂದ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.
 ಅತಿವೃಷ್ಟಿಯಿಂದ ಹಾನಿಗೊಳಗಾದ ಕೆರೆಗಳ ಪುನರ್ ನಿರ್ಮಾಣ, ಒಡ್ಡು ನಿರ್ಮಾಣಕ್ಕೆ ಒಟ್ಟೂ,  42.5ಕೋಟಿ
 ನಾಲ್ಕು ಸೇತುವೆಗಳ ನಿರ್ಮಾಣಕ್ಕೆ  9.26ಕೋಟಿ ರೂ., ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಇದು ರಾಜೀನಾಮೆ ನೀಡಿದ ನಂತರ ಕ್ಷೇತ್ರ ಅನಾಥವಾಗಿದೆ ಎಂದವರಿಗೆ ಉತ್ತರವಾಗಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ ನ.13 ರಂದು ವಿಚಾರಣೆ ನಿಗದಿ ಮಾಡಿದೆ. ಅಂದು ತೀರ್ಪು ಬರಲಿದೆ. ನ್ಯಾಯದ ಪರ ತೀರ್ಪು ಬರುವ ಅಪೇಕ್ಷೆಯಿದೆ.‌ ನಮಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹೆಬ್ಬಾರ್, ಖಂಡಿತ ಚುನಾವಣೆಗೆ ನಿಲ್ಲುತ್ತೇನೆ. ತೀರ್ಪಿನ ನಂತರ ರಾಜಕೀಯ ನಡೆ ಸ್ಪಷ್ಟಪಡಿಸುತ್ತೇನೆ. ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ ಎಂದು ವಿರೋಧ ಪಕ್ಷದವರಿಗೆ ತಿವಿದರು.
ಜೇಬಿನಿಂದ ಸಿದ್ದರಾಮಯ್ಯ ಹಣ ನೀಡಿಲ್ಲ:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ನಲ್ಲಿ ಉಪ ಮುಖ್ಯಮಂತ್ರಿ ಇದ್ದವರು. ಆದರೆ ಅವರು ಪಕ್ಷ ಬಿಟ್ಟು ಬಂದಿದ್ದರು. ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ. ನಾನು ಶಾಸಕ ಸ್ಥಾನಕ್ಕೆ  ರಾಜೀನಾಮೆ ನೀಡಿ ಹೊರ ಬಂದಿದ್ದೇನೆ‌.  ಸಿದ್ಧರಾಮಯ್ಯನವರ ಮೇಲೆ‌ ವಯಕ್ತಿಕವಾಗಿ ಗೌರವ ಇದೆ. ಆದರೆ ಅವರು ಮಾತನಾಡಿರುವ, ಉಪಯೋಗಿಸಿರುವ ಭಾಷೆ ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ. ನಾನು ಒಬ್ಬ ಸರ್ಕಾರದ ಭಾಗವಾಗಿ ಹಣ ತಂದಿದ್ದೇನೆ. ಅವರ ಜೇಬಿನಿಂದ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ವಿಜಯ ಮಿರಾಶಿ, ಭೈವರ್ ಕಾಮತ್, ರವಿ ಗೌಡ ಪಾಟೀಲ್, ಸುರೇಶ ನಾಯ್ಕ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.