‘ಓಂ ಬೀಚ್’ನಲ್ಲಿ ನೀರಿನ ಸುಳಿಗೆ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿದ್ದ ಪ್ರವಾಸಿಗನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿ ಓಂ ಕಡಲ ತೀರದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಹರಿಯಾಣದ ಗುರ್‍ಗಾಂವ್ ಮೂಲದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಮೂರು ಜನರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ನೀರಿನ ಸುಳಿಗೆ ಸಿಲುಕಿದ್ದು, ಇದನ್ನು ಗಮನಿಸಿ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿಗಳಾದ ಹರೀಶ ಹರಿಕಾಂತ , ಪಾಂಡುರಂಗ ಅಂಬಿಗ ,ಪ್ರಭಾಕರ ಅಂಬಿಗ ತಕ್ಷಣ ಧಾವಿಸಿ ಜೀವಾಪಾಯದಿಂದ ರಕ್ಷಿಸಿದ್ದಾರೆ. ಇವರ ಜೊತೆ ಪ್ರವಾಸಿ ಮಿತ್ರ ಸತೀಶ ನಾಯ್ಕ ಸಹಕರಿಸಿದ್ದಾರೆ. ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗ ಕುಲದೀಪ ಸಿಂಗ್ (43) ಎನ್ನುವವರಾಗಿದ್ದು, ಜೀವರಕ್ಷಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅರ್ಧಘಂಟೆ ಅಂತರದಲ್ಲಿ ಮತ್ತೊಂದು ಘಟನೆ:
ವಿದೇಶಿ ಪ್ರಜೆ ರಕ್ಷಣೆ : ಇದೇ ಮೊದಲ ಬಾರಿಗೆ ವಿದೇಶಿ ಪ್ರಜೆಯೊಬ್ಬ ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಭಾರಿ ಅಲೆಯನ್ನು ತಪ್ಪಿಸಿಕೊಳ್ಳಲಾಗದೆ ಜೀವಾಪಾಯದಲ್ಲಿದ್ದಾಗ, ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿಗಳಾದ ಪಾಂಡುರಂಗ ಹರಿಕಾಂತ, ಹರೀಶ ಅಂಬಿಗ ತಕ್ಷಣ ಧಾವಿಸಿ ರಕ್ಷಿಸಿದ್ದಾರೆ. ಜೀವರಕ್ಷಕ ಸಿಬ್ಬಂದಿ ಮೇಲ್ವಿಚಾರಕ ರವಿ ನಾಯ್ಕ , ಮತ್ತು ಪ್ರವಾಸಿ ಮಿತ್ರ ಸತೀಶ ನಾಯ್ಕ ಸಹಕರಿಸಿದ್ದಾರೆ. ಇಸ್ರೇಲ್ ಮೂಲದ ವಿಕ್ಟರ್ (73) ರಕ್ಷಿಸಲ್ಪಟ್ಟ ವಿದೇಶಿ ಪ್ರಜೆಯಾಗಿದ್ದಾರೆ.ಸಾಮಾನ್ಯವಾಗಿ ವಿದೇಶಿಗರು ಸಮುದ್ರದಲ್ಲಿ ಈಜಾಡುವಾಗ ಬಹಳ ಜಾಗೃತವಾಗಿರುತ್ತಿದ್ದು, ಅಪಾಯದಲ್ಲಿ ಸಿಲುಕುವುದು ತುಂಬಾ ವಿರಳ , ಅಲ್ಲದೆ ಈ ಹಿಂದೆ ಅನೇಕ ದೇಶಿ ಪ್ರವಾಸಿಗರು ಅಪಾಯದಲ್ಲಿದ್ದಾಗೆ ವಿದೇಶಿಗರು ರಕ್ಷಿಸಿದ ಉದಾಹರಣೆಗಳಿವೆ. 2017ರ ನಂತರ ವಿದೇಶಿ ಪ್ರಜೆಯೊಬ್ಬ ಅಪಾಯದಲ್ಲಿ ಸಿಲುಕಿದ್ದು ಇದು ಮೊದಲನೇ ಘಟನೆಯಾಗಿದೆ. ಎರಡು ಘಟನೆಯಲ್ಲಿ ಜೀವರಕ್ಷಕ ಸಿಬ್ಬಂದಿ (ಲೈಫ್ ಗಾರ್ಡ) ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ರಕ್ಷಿಸಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.