ಮೀನು ಮಾರುಕಟ್ಟೆಗೆ ಸುಸಜ್ಜಿತ ಶೆಡ್ ಒದಗಿಸಲು ಶಾಸಕ ದಿನಕರ ಶೆಟ್ಟಿಗೆ ಮನವಿ

 

ಕುಮಟಾ: ಪಟ್ಟಣದ ಮೀನು ಮಾರುಕಟ್ಟೆಗೆ ಶೀಘ್ರದಲ್ಲೇ ಶೆಡ್ ನಿರ್ಮಿಸಿಕೊಡಬೇಕು ಹಾಗೂ ಮೀನು ಮಾರಾಟಗಾರರಿಗೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಹಸ್ತಾಂತರಿಸಿದ ಬಳಿಕವೇ ಪುರಸಭೆ ಶುಲ್ಕವನ್ನು ವಸೂಲಿ ಮಾಡುವಂತೆ ಸೂಚಿಸಬೇಕು ಎಂದು ಮೀನು ಮಾರಾಟಗಾರ ಮಹಿಳೆಯರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ವಿನಂತಿಸಿಕೊಂಡರು.
ಮೀನು ಮಾರುಕಟ್ಟೆಯ ಪುನರ್ ನಿರ್ಮಾಣದ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಆದರೆ ಗುತ್ತಿಗೆ ಪಡೆದ ಲ್ಯಾಂಡ್ ಆರ್ಮಿಯು ಕಟ್ಟಡ ಕಾಮಗಾರಿಯನ್ನು ಇನ್ನೂ ಸಮರ್ಪಕವಾಗಿ ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ಮೀನು ಮಾರಾಟಗಾರ ಮಹಿಳೆಯರು ಬಿಸಿಲು, ಮಳೆಯಲ್ಲಿಯೇ ಮೀನು ಮಾರಾಟ ಮಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ನೂರಾರು ಮೀನು ಮಾರಾಟಗಾರ ಮಹಿಳೆಯರು ಶಾಸಕ ದಿನಕರ ಶೆಟ್ಟಿಯವರ ಮನೆಗೆ ಆಗಮಿಸಿ ತಮ್ಮ ಅಳಲನ್ನು ತೋಡಿಕೊಂಡರು.
ಮೀನು ಮಾರಾಟಗಾರರಿಗೆ ಮೀನು ಮಾರಾಟಕ್ಕೆ ಸೂಕ್ತ ಕಟ್ಟಡವನ್ನು ಕಲ್ಪಿಸದೇ ಪುರಸಭೆಯು ಶುಂಕ ವಸೂಲಿಗೆ ಮುಂದಾಗಿದೆ. ಸಂಬಂಧಿಸಿದ ಇಲಾಖೆ ಮೀನು ಮಾರುಕಟ್ಟೆಯ ಕಟ್ಟಡವನ್ನು ಸಂಪೂರ್ಣವಾಗಿ ನಿರ್ಮಿಸಿಕೊಡುವವರೆಗೂ ಮೀನು ಮಾರಾಟಗಾರರು ಪುರಸಭೆಗೆ ಶುಂಕವನ್ನು ಕಟ್ಟುವುದಿಲ್ಲ. ಅದಲ್ಲದೇ, ಮೀನುಮಾರಾಟಗಾರ ಮಹಿಳೆಯರಿಗೆ ಸಂಬಂಧಿಸಿದ ಕೆಲ ಸಭೆಗಳಿಗೆ ಪುರಸಭೆಯ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಪುರಸಭೆಯ ಮುಖ್ಯಾಧಿಕಾರಿ ಮೀನುಮಾರಾಟಗಾರ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಶೀಘ್ರದಲ್ಲೇ ಮೀನು ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಮೀನು ಮಾರಾಟಗಾರ ಮಹಿಳೆಯರಿಗೆ ಮಂಜೂರಾದ 50 ಸಾವಿರ ರೂ. ಹಣವನ್ನು ಬ್ಯಾಂಕಿಗೆ ಹೋಗಿ ವಿಚಾರಿಸಿದರೆ, ನಿಮಗೆ 50 ಸಾವಿರದ ಅವಶ್ಯಕತೆಯಿದೆಯೇ, ಇಷ್ಟು ಹಣ ಪಡೆದು ಏನು ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಎಲ್ಲ ಮೀನು ಮಾರಾಟಗಾರ ಮಹಿಳೆಯರಿಗೆ ಶೀಘ್ರದಲ್ಲೇ 50 ಸಾವಿರ ರೂ.ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಮೀನು ಮಾರುಕಟ್ಟೆಯ ಪುನರ್ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆ ಪಡೆದ ಕೆಆರ್‍ಐಡಿಎಲ್ ಅಭಿಯಂತರರಿಗೆ ಸ್ಥಳಕ್ಕೆ ಕರೆಯಿಸಿ, ಮಾರುಕಟ್ಟೆಯ ಪುನರ್ ನಿರ್ಮಾಣದ ಕಾಮಗಾರಿ ಪ್ರಾರಂಭಗೊಂಡು ಎರಡು ವರ್ಷಗಳೇ ಕಳೆದಿವೆ. ಇನ್ನೂ ಮೀನು ಮಾರಾಟಗಾರರಿಗೆ ಶೆಡ್ ಹಸ್ತಾಂತರಿಸಲಿಲ್ಲ. ನಿಮ್ಮ ಬೇಜವಾಬ್ದಾರಿತನದಿಂದ ಮೀನು ಮಾರಾಟಗಾರ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮೀನು ಮಾರಾಟಗಾರ ಮಹಿಳೆಯರಿಗೆ ಅನುಕೂಲವಾಗುವಂತೆ ಶೀಘ್ರ ಶೆಡ್ ನಿರ್ಮಿಸಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಹರಿಕಂತ್ರ, ನಾಗರಾಜ ಹರಿಕಾಂತ, ರಾಘವೇಂದ್ರ ಜಾಧವ್, ಮೀನು ಮಾರಾಟಗಾರ ಮಹಿಳೆಯರಾದ ನಾಗಮ್ಮಾ ಹರಿಕಾಂತ, ದೇವಿ ಹರಿಕಾಂತ, ಮೀನಾಕ್ಷಿ ಹರಿಕಂತ್ರ, ರೇಣುಕಾ ಅಂಬಿಗ, ಹಬಿಬಾ ಅಕ್ಬರ್, ವೀಣಾ ಹರಿಕಂತ್ರ, ಗೌರೀಶ ಕುಬಾಲ್ ಸೇರಿದಂತೆ ನೂರಾರು ಮೀನು ಮಾರಾಟಗಾರ ಮಹಿಳೆಯರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.