ಅನರ್ಹ ಶಾಸಕರ ಪರಿಸ್ಥಿತಿ ಈಗ ಡೋಲಾಯಮಾನ; ಮಾಜಿ ಶಾಸಕ ಕೋನರೆಡ್ಡಿ

ಮುಂಡಗೋಡ: ಅನರ್ಹ ಶಾಸಕರು ತಮ್ಮ ಕೇತ್ರಕ್ಕೆ ಅನುದಾನ ನೀಡಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಹೇಳುತ್ತಾರೆ. ಅವರು ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 15 ಕೇತ್ರಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕುಮಾರಸ್ವಾಮಿಯವರ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಈಗಲೂ ಬಿಜೆಪಿ ಹಾಗೂ ಕಾಂಗ್ರೆಸ್‍ನ ಕೆಲ ಶಾಸಕರು ಅವರ ಆಡಳಿತವನ್ನು ಮೆಚ್ಚುತ್ತಾರೆ. ಈ ಹಿಂದೆ ಮೂರ್ನಾಲ್ಕು ಜನ ಶಾಸಕರು ರಾಜೀನಾಮೆ ಕೊಟ್ಟಿದ್ದನ್ನು ನೋಡಿದ್ದೇವೆ. 17 ಜನ ಶಾಸಕರು ಒಮ್ಮೆಲೇ ರಾಜೀನಾಮೆ ನೀಡುವುದನ್ನು ನಾನು ಇದೇ ಮೊದಲ ಬಾರಿ ನೋಡಿರುವುದು. ಎಲ್ಲ ಪಕ್ಷದಲ್ಲಿಯೂ ಒಡಕು ಸಾಮಾನ್ಯ ಅವುಗಳನ್ನು ಸರಿಪಡಿಸಿಕೊಂಡು ಹೋಗುವುದು ಮುಖಂಡರ ಕರ್ತವ್ಯ ಎಂದರು.

ಬಿಜೆಪಿಯಲ್ಲಿ ಮೂರು ಭಾಗಗಳಾಗಿವೆ. ಅದರಂತೆ ಜೆಡಿಎಸ್‍ನಲ್ಲಿಯೂ ಸ್ವಲ್ಪ ಮಟ್ಟಿಗೆ ಅಸಮಾಧಾನವಿದೆ ಅವೆಲ್ಲವನ್ನೂ ಸರಿಪಡಿಸಿಕೊಂಡು ಸಂಘಟನೆ ಮಾಡಲಾಗುವುದು. ಅನರ್ಹ ಶಾಸಕರ ಪರಿಸ್ಥಿತಿ ಈಗ ಡೋಲಾಯಮಾನವಾಗಿದೆ. ಸುಪ್ರೀಂ ಕೋರ್ಟ್‍ನ ಆದೇಶದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.
ಬರುವ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಿಸಲು ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಇವರೆಲ್ಲ ಸೇರಿ ತೀರ್ಮಾನ ಮಾಡಿದ್ದೇವೆ.

ಯಲ್ಲಾಪುರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಜೆಡಿಎಸ್‍ನಿಂದ ಮುನಾಫ್ ಮಿರ್ಜಾನಕರ, ಮಲ್ಲಿಕಾರ್ಜುನ ಕುಟ್ರಿ, ಅರುಣ ಗೋಂದಳೆ, ಚೈತ್ರಾ ಗೌಡ, ಉಮಾಕಾಂತ ಬೆಳ್ಳನಕೇರಿ ಈ 5 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕೇತ್ರದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಏಕೆ ದುರ್ಬಲವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಲಾಗುವುದು ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.