ಬಾಡಿಗೆಗೆ ಟೂರಿಸ್ಟ್ ವಾಹನವನ್ನೇ ಬಳಸುವಂತೆ ಆಗಬೇಕು: ಟ್ಯಾಕ್ಸಿ ಚಾಲಕ- ಮಾಲಕರ ಸಂಘದಿಂದ ಉಪವಿಭಾಗಾಧಿಕಾರಿಗೆ ಮನವಿ

ಕುಮಟಾ: ವೈಟ್‍ಬೋರ್ಡ್ ಕಾರುಗಳನ್ನು ಬಾಡಿಗೆಗೆ ಬಳಸುತ್ತಿರುವುದರಿಂದ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಸಿಗದೇ, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಬಾಡಿಗೆಗೆ ಟೂರಿಸ್ಟ್ ವಾಹನಗಳನ್ನೇ ಬಳಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಹಾಸತಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಶುಕ್ರವಾರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಾದ್ಯಂತ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಖಾಸಗಿ ವಾಹನಗಳನ್ನು ಕೆಲವರು ಬಾಡಿಗೆಗೆ ಬಳಸುತ್ತಿದ್ದು, ಇದರಿಂದ ಸಾವಿರಾರು ರೂ. ತೆರಿಗೆ ಪಾವತಿಸುವ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದೇ ತೊಂದರೆಯಾಗುತ್ತಿದೆ. ಈ ಬಗ್ಗೆ ಮಹಾಸತಿ ಟ್ಯಾಕ್ಸಿ ಚಾಲಕ ಮಾಲಕ ಸಂಘವು ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಟೂರಿಸ್ಟ್ ವಾಹನದವರು ಸಾವಿರಾರು ರೂಪಾಯಿ ರಸ್ತೆ ತೆರಿಗೆ, ವಿಮಾ ಮೊತ್ತ ಪಾವತಿಸುತ್ತಿದ್ದಾರೆ. ಆದರೆ ವೈಟ್‍ಬೋರ್ಡ್‍ನವರು ಬಾಡಿಗೆ ಹೊಡೆಯುತ್ತಿದ್ದಾರೆ. ಬಾಡಿಗೆಗೆ ಪ್ರತಿಯೊಬ್ಬರೂ ಟೂರಿಸ್ಟ್ ವಾಹನಗಳನ್ನೇ ಕಡ್ಡಾಯವಾಗಿ ಬಳಸುವಂತೆ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡರು.

ನಂತರ ಮಹಾಸತಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ನವೀನ ನಾಯ್ಕ ಮಾತನಾಡಿ, ಸ್ವಂತ ಬಳಕೆಗೆ ಖರೀದಿಸಿದ ವಾಹನಗಳನ್ನು ಹಲವರು ಬಾಡಿಗೆಗೆ ಬಳಸುತ್ತಿದ್ದಾರೆ. ಇದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಕರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಪ್ರವಾಸಿಗರು ಇಂತಹ ವಾಹನಗಳನ್ನು ಬಳಸುವುದರಿಂದ ಅಪಘಾತವಾದ ಸಂದರ್ಭದಲ್ಲಿ ವಿಮಾ ಮೊತ್ತಗಳು ಸಿಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಂತಹ ವಾಹನಗಳನ್ನು ತಪಾಸಣೆ ನಡೆಸಿ, ಸೂಕ್ತಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಹಾಯಕ ಆಯುಕ್ತ ಎಂ.ಅಜಿತ್ ಪ್ರತಿಕ್ರಿಯಿಸಿ, ಸ್ವಂತ ಬಳಕೆಗೆ ಖರೀದಿಸಿದ ವೈಟ್‍ಬೋರ್ಡ್ ವಾಹನಗಳನ್ನು ಬಾಡಿಗೆಗೆ ಬಳಸಬಾರದು ಎಂಬ ನಿಯಮವಿದೆ. ಇದರ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಸಧ್ಯದಲ್ಲಿಯೇ ಟ್ಯಾಕ್ಸಿ ಚಾಲಕ ಮತ್ತು ಮಾಲಕರ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಲಾಗುತ್ತದೆ. ಈ ವಿಷಯದ ಕುರಿತು ಗಂಭೀರವಾಗಿ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಸಿಪಿಐ ಪರಮೇಶ್ವರ ಗುನಗಾ, ಮಹಾಸತಿ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಪ್ರಮುಖರಾದ ಸುಬ್ರಹ್ಮಣ್ಯ ಉಡದಂಗಿ, ಪ್ರಶಾಂತ ನಾಯ್ಕ, ಕೃಷ್ಣ ಗೌಡ, ಕಿರಣ ಗೋನ್ಸಾಲೀಸ್, ಗಿರೀಶ ನಾಯ್ಕ, ರವಿ ಹೆಬ್ಬಾರ, ಮಂಜು ಮುಕ್ರಿ, ದೀಪಕ ಮುಕ್ರಿ, ಗೌತಮ ಮಾಪಾರಿ, ಸಚೀಂದ್ರ ಪ್ರಭು, ಮಣಿಕಂಠ, ವಿಶ್ವನಾಥ ನಾಯ್ಕ, ರಾಘು ಮೊಗೇರ್, ಪ್ರಸನ್ನ ಸಣ್ಮನೆ, ವಿಶ್ವನಾಥ ಗೌಡ, ವಿಘ್ನೇಶ ಕೆಂಗೇರಿ, ಚೇತನ ಗೌಡ, ಸುರೇಶ ನಾಯ್ಕ ಸೇರಿದಂತೆ ಹಲವರಿದ್ದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.