ಕುಮಟಾ ಮಾರುಕಟ್ಟೆಯಲ್ಲಿ ತುಳಸಿ ಮದುವೆಗೆ ವಸ್ತುಗಳ ಖರೀದಿ ಜೋರು: ಹೂ- ಕಬ್ಬಿನ ಬೆಲೆ ಏರಿಕೆ

ಕುಮಟಾ: ಮಾರುಕಟ್ಟೆಯಲ್ಲಿ ತುಳಸಿ ಮದುವೆಗೆ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದ್ದು, ಹೂವು ಹಾಗೂ ಕಬ್ಬಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರನ್ನು ಕಂಗೆಡಿಸಿದೆ.

ತುಳಸಿ ಮದುವೆಯಲ್ಲಿ ತುಳಸಿ ಗಿಡವನ್ನು ಬೆಟ್ಟದ ನೆಲ್ಲಿಕಾಯಿಯ ಗಿಡಕ್ಕೆ ವಿವಾಹ ಮಾಡುವ ಸಂಪ್ರದಾಯವಿದೆ. ಮದುವೆಯ ದಿನದಂದು ತುಳಸಿ ಕಟ್ಟೆಯನ್ನು ವಿದ್ಯುತ್ ದೀಪದ ಅಲಂಕಾರದಿಂದ ಶೃಂಗರಿಸಿ, ಬಣ್ಣ ಬಣ್ಣದ ರಂಗೋಲಿ, ಕಬ್ಬುಗಳ ಮಂಟಪ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ಕಬ್ಬು, ಹೂವು, ಬೆಟ್ಟದ ನೆಲ್ಲಿಕಾಯಿ ಗಿಡಗಳ ಖರೀದಿ ಜೋರಾಗಿ ನಡೆಯಿತು.

ತುಳಸಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಕಬ್ಬು ಹಾಗೂ ಇನ್ನಿತರ ವಸ್ತುಗಳ ಬೆಲೆ ದಿನದ ಮಾರುಕಟ್ಟೆಗಿಂತ ಸ್ವಲ್ಪ ಪ್ರಮಾಣದಲ್ಲಿ ಧಿಕವಾಗಿತ್ತು. ಚೆಂಡು ಹೂವಿಗೆ 30 ರಿಂದ 40 ರೂಪಾಯಿ, ಸೇವಂತಿ ಒಂದು ಮಾರು ಹೂವಿಗೆ 80 ರಿಂದ 100 ರೂಪಾಯಿಯಾಗಿದ್ದು, 10 ಕಬ್ಬಿಗೆ 280 ರೂಪಾಯಿಯಂತೆ ಮಾರಾಟವಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದೆ ಈ ಬಾರಿ ಕಬ್ಬಿನ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದೆ.

ತುಳಸಿ ಮದುವೆ ನಿಮಿತ್ತ ಮಾರುಕಟ್ಟೆಗೆ ಶಿವಮೊಗ್ಗ ಜಿಲ್ಲೆಯಿಂದ ಅತ್ಯಧಿಕ ಪ್ರಮಾಣದಲ್ಲಿ ಸುಮಾರು 10 ಲಾರಿಗಳಲ್ಲಿ ಕಬ್ಬಿನ ಲೋಡ್ ಬಂದಿದ್ದು, ಆದರೆ ಕಬ್ಬಿನ ಬೆಲೆ ಗಗನಕ್ಕೇರಿರುವುದು ಗ್ರಾಹಕರನ್ನು ಕಂಗೆಡಿಸಿದೆ. ಹತ್ತು ಕಬ್ಬುಗಳಿಗೆ 280 ರಿಂದ 300 ರೂಪಾಯಿ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಸ್ಥಳೀಯ ಕಬ್ಬುಗಳೂ ಸಹ ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಕಬ್ಬಿನ ಬೆಲೆ ಮಾತ್ರ ಇಳಿಕೆಯಾಗಲಿಲ್ಲ.

ಅಕಾಲಿಕ ಮಳೆಯ ಕಾರಣದಿಂದ ಕಬ್ಬಿನ ಗದ್ದೆಗಳಲ್ಲಿ ನೀರು ತುಂಬಿರುವುದರಿಂದ ಲಾರಿಗಳು ಗದ್ದೆಗೆ ತೆರಳುವುದಿಲ್ಲ. ಕೂಲಿಕಾರರಿಂದ ಲಾರಿಗೆ ಲೋಡ್ ಮಾಡಿಸುವುದರಿಂದ ಬೆಲೆ ಏರಿಕೆಯಾಗಿದೆ. ಸಾಗಾಣಿಕೆಯ ವೆಚ್ಚದಲ್ಲಿಯೂ ಸಹ ಏರಿಕೆಯಾಗಿರುವುದರಿಂದ ಒಂದು ಕಬ್ಬಿಗೆ ಸುಮಾರು 20 ರಿಂದ 22 ರೂ. ವೆಚ್ಚ ತಗುಲುತ್ತದೆ. ಈ ಕಾರಣದಿಂದ ಕಬ್ಬಿನ ಬೆಲೆ ದುಬಾರಿಯಾಗಿದೆ. ಈ ವರ್ಷ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆ ಎನ್ನುತ್ತಾರೆ ಸ್ಥಳೀಯ ಕಬ್ಬಿನ ವ್ಯಾಪಾರಿ ಮಂಜುನಾಥ ದೇಶಭಂಡಾರಿ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.