2020ರ ಮಾರ್ಚ ವೇಳೆಗೆ NWKRTC ಗೆ 645 ಹೊಸ ಬಸ್: ಅಧ್ಯಕ್ಷ ವಿ.ಎಸ್.ಪಾಟೀಲ್

ಶಿರಸಿ: 2020 ರ ಮಾರ್ಚ ವೇಳೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 645 ನೂತನ ಬಸ್ ಗಳು ಬರಲಿದ್ದು, ಉತ್ತರ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯದೊಂದಿಗೆ ಅಗತ್ಯ ಇರುವ ಕಡೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದರು. ‌

ಇಲ್ಲಿನ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಜನಪ್ರತಿನಿಧಿಗಳು, ಸಾರ್ವಜನಿಕರ ಸಾರಿಗೆ ಸಮಸ್ಯೆಗಳ ಅಹವಾಲು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನವರಿಯಲ್ಲಿ 200 ಬಸ್ ಹಾಗೂ ಮಾರ್ಚ ಅಂತ್ಯದ ವೇಳೆ ಉಳಿದ 645 ಬಸ್ ಗಳು ಬರಲಿದೆ. ಆಗ ಜಿಲ್ಲೆಗೆ ಅಗತ್ಯವಿರುವ ಬಸ್ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಸಂಸ್ಥೆ ನಷ್ಟದಲ್ಲಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತೇವೆ. ನಷ್ಟ ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಸರ್ಕಾರದಿಂದ ಹಣ ತರುವ ಕೆಲಸ ಮಾಡುತ್ತೇವೆ.ಕಂಡಕ್ಟರ್, ಡ್ರೈವರ್ ಕೊರತೆಯನ್ನೂ 2-3 ತಿಂಗಳಲ್ಲಿ ಸರಿಪಡಿಸಯತ್ತೇವೆ ಎಂದು ಭರವಸೆ ನೀಡಿದ ಪಾಟೀಲ್, ಸಂಸ್ಥೆಯ ಒಳಗಡೆ ಆಡಳಿತ ಬಿಗಿ ಹೊಡಿತ ಹೊಂದಿಲ್ಲ. ಅದನ್ನು ಸರಿಡಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯಾರ್ಥಿಗಳನ್ನು ನೋಡಿದಾಗ ಬಸ್ ನಿಲ್ಲಿಸಲು ಡ್ರೈವರ್ ಗಳು ಹಿಂದು ಮುಂದೆ ನೋಡುತ್ತಾರೆ. ಕೆಲವೊಮ್ಮೆ ಖಾಲಿಯಿದ್ದರೂ ನಿಲ್ಲಿಸುವುದಿಲ್ಲ. ಇದರಿಂದ ಅವರ ಶೈಕ್ಷಣಿಕ ಜೀವನಕ್ಕೆ ಸಮಸ್ಯೆಯಾಗುತ್ತಿದೆ ಎಂದು ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಅಸಮಧಾನ ವ್ಯಕ್ತಪಡಿಸಿದರು. ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ತಾಲೂಕಿನಾದ್ಯಂತ ಈ ಸಮಸ್ಯೆ ಇದ್ದು, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪಾಟೀಲರಲ್ಲಿ ಕೇಳಿಕೊಂಡರು.

ಅಹವಾಲುಗಳಿಗೆ ಉತ್ತರಿಸಿದ ಸಂಸ್ಥೆ ಅಧಿಕಾರಿಗಳು, ಅಂತರಾಜ್ಯ, ಎಕ್ಸಪ್ರೇಸ್ ಬಸ್ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಕುಮಟಾ ರೂಟ್ ನಲ್ಲಿ ಬಸ್ ನಿಲುಗಡೆ ಆಗುತ್ತಿದೆ. ವಿದ್ಯಾರ್ಥಿಗಳನ್ನು ಬಿಟ್ಟು ಹೋಗದಂತೆ ಈಗಾಗಲೇ ಡ್ರೈವರ್ ಗಳಿಗೆ ಸೂಚನೆ ನೀಡಲಾಗಿದೆ. ನಗರಕ್ಕೆ ಹೊಸ ಬಸ್ ನೀಡಲಾಗುತ್ತದೆ ಹಾಗೂ ನಾರಾಯಣ ಗುರು ನಗರಕ್ಕೆ ಪ್ರತಿ ದಿವಸ ಬಸ್ ಬಿಡುತ್ತೇವೆ ಎಂದು ಮಾಹಿತಿ ನೀಡಿದರು. ಕೆಲವೊಂದು ಸಮಸ್ಯೆಗಳಿಗೆ ಅಪೂರ್ಣವಾಗಿ ಉತ್ತರಿಸಿದ ಅಧಿಕಾರಿಗಳು, ಹಾರಿಕೆ ಉತ್ತರ ನೀಡಿ ಸಭೆ ಮುಗಿಸಿದರು. ಇದು ಕೆಲ ಜನಪ್ರತಿನಿಧಿಗಳ ಅಸಮಧಾನಕ್ಕೆ ಕಾರಣವಾಯಿತು. ಶಿರಸಿ ಹಳೆ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಪಾಟೀಲ್ ಭರವಸೆ ನೀಡಿದರು.

ಈ ವೇಳೆ ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ, ಸಂಸ್ಥೆಯ ಡಿಸಿ ವಿವೇಕ ಹೆಗಡೆ, ಜಿಪಂ ಸದಸ್ಯೆ ಪ್ರಭಾವತಿ ಗೌಡ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಸೇರಿದಂತೆ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.