ಅ.13 ಕ್ಕೆ ನೃತ್ಯಗಾರರ ಸಂಘ ಉದ್ಘಾಟನಾ ಸಮಾರಂಭ

ಕುಮಟಾ: ನೃತ್ಯಗಾರರಿಗೆ ಆರ್ಥಿಕ ಸಹಾಯ ಮತ್ತು ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ನೃತ್ಯಗಾರರ ಸಂಘ ಜನ್ಮ ತಾಳಿದ್ದು, ಇದೇ ಬರುವ ಅ.13 ರಂದು ಮಧ್ಯಾಹ್ನ 3.30 ಗಂಟೆಗೆ ಪಟ್ಟಣದ ಪುರಭವನದಲ್ಲಿ ಸಂಘವು ಉದ್ಘಾಟನೆಗೊಳ್ಳಲಿದೆ ಎಂದು ನೃತ್ಯಗಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗಣಪತಿ ಶೆಟ್ಟಿ ತಿಳಿಸಿದರು.

ಅವರು ಗುರುವಾರ ಪಟ್ಟಣದ ಶಾಂತಿಕಾಂಬಾ ನೃತ್ಯ ತರಬೇತಿ ಕೇಂದ್ರದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ನೃತ್ಯಗಾರರು ಅನಾರೋಗ್ಯ ಅಥವಾ ಇನ್ನಿತರ ತೊಂದರೆಗಳಿಗೆ ತುತ್ತಾದಾಗ ಅಂತಹವರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಈ ಸಂಘ ಕಾರ್ಯನಿರ್ವಹಿಸಲಿದೆ. ಉಳಿದ ಎಲ್ಲ ರಂಗದವರೂ ತಮ್ಮ ಸ್ವಂತ ಸಂಘವನ್ನು ಹೊಂದಿದ್ದಾರೆ. ಆದರೆ ಉತ್ತರ ಕನ್ನಡದ ನೃತ್ಯಗಾರರು ಇದುವರೆಗೂ ಸಂಘವನ್ನು ಹೊಂದಿಲ್ಲವಾಗಿತ್ತು. ಅದನ್ನು ಮನಗಂಡು ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದ ಅವರು, ನೃತ್ಯಗಾರರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಕಾರ್ಯಕ್ರಮಕ್ಕೆ ತೆರಳಿದಾಗ ಅವರಿಗೆ ಅಲ್ಲಿ ಅನ್ಯಾಯವಾದರೆ ಅವರ ಬೆಂಬಲಕ್ಕೂ ಈ ಸಂಘ ನಿಲ್ಲುತ್ತದೆ ಎಂದರು.

ನೃತ್ಯಗಾರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಭಟ್ಕಳ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ನೃತ್ಯಗಾರರಿಗೆ ಧನ ಸಹಾಯದ ಮೂಲಕ ಅವರ ಪ್ರತಿಭೆಗೆ ಉತ್ತಮ ಪ್ರೋತ್ಸಾಹ ನೀಡುವ ಉದ್ದೇಶವನ್ನು ಈ ಸಂಘ ಹೊಂದಿದೆ. ವೈದ್ಯಕೀಯ ನೆರವಿನ ಜೊತೆಗೆ ವೈಯಕ್ತಿಕ ನೆರವು ನೀಡುವ ಉದ್ದೇಶ ಈ ಸಂಘದ್ದಾಗಿದೆ ಎಂದ ಅವರು, ಇದೇ ಬರುವ ಅ. 13 ರಂದು ಮಧ್ಯಾಹ್ನ 3.30 ಘಂಟೆಗೆ ಪಟ್ಟಣದ ಪುರಭವನದಲ್ಲಿ ಕನ್ನಡ ಹಾಗೂ ತುಳು ಚಿತ್ರನಟ ಪೃಥ್ವಿ ಅಂಬಾರ ಕನ್ನಡ ಜಿಲ್ಲಾ ನೃತ್ಯಗಾರರ ಸಂಘವನ್ನು ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ರವಿಕುಮಾರ ಶೆಟ್ಟಿ, ಚಲನಚಿತ್ರ ನಟ ಹಾಗೂ ಉದ್ಯಮಿ ಸುಬ್ರಾಯ ವಾಳ್ಕೆ, ಸೇಫ್ ಸ್ಟಾರ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಿ.ಜಿ.ಶಂಕರ, ಹೊನ್ನಾವರದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಸತ್ಯ ಜಾವಗಲ್, ಉತ್ತರಕನ್ನಡ ಜಿಲ್ಲಾ ನೃತ್ಯಗಾರರ ಸಂಘದ ಗೌರವಾಧ್ಯಕ್ಷ ಗಣಪತಿ ಶೆಟ್ಟಿ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿಜೇತ ಸಂಕೇತ ಗಾಂವ್ಕರ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಪ್ರಸನ್ನ ಪ್ರಭು, ಭರತನಾಟ್ಯ ಶಿಕ್ಷಕರಾದ ಡಾ.ಸೀಮಾ ಭಾಗ್ವತ್, ಡಾ.ಸಹನಾ ಭಟ್ಟ, ನೃತ್ಯಗಾರರ ಸಂಘದ ಕಾನೂನು ಸಲಹೆಗಾರ್ತಿ ಸೌಂದರ್ಯ.ಕೆ.ಎಸ್, ನೃತ್ಯ ನಿರ್ದೇಶಕರಾದ ಸೂರ್ಯಪ್ರಕಾಶ, ರಾಘವೇಂದ್ರ ಮೂಳೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಮೋದ ಬಡಿಗೇರ, ವಿಶ್ವನಾಥ, ಸುಜಿತ್ ಗುನಗಾ ಮತ್ತಿತರರು ಉಪಸ್ಥಿತರಿದ್ದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.