ಜೈನ ಮಠದಲ್ಲಿ ವೈಭವದಿಂದ ನಡೆದ ಜಂಬೂ ಸವಾರಿ: ಸಾವಿರಾರು ಭಕ್ತರು ಭಾಗಿ

ಶಿರಸಿ: ಜೈನ ಸಮುದಾಯದ ಪ್ರಸಿದ್ಧ ಪುಣ್ಯಕ್ಷೇತ್ರ ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ವಿಜಯ ದಶಮಿಯ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಂತೆ ಜೈನ ತೀರ್ಥಂಕರರ ಮೂರ್ತಿಯ ಜಂಬೂ ಸವಾರಿ ನಡೆಯಿತು.

ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆದ ವಿಜಯ ದಶಮಿಯಂದು ಕ್ಷೇತ್ರದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ದಿವ್ಯೋಪಸ್ಥಿತಿಯಲ್ಲಿ ಗಜಗಾಂಭೀರ್ಯದಿಂದ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅದ್ಭುತ ಕ್ಷಣವನ್ನು ತಮ್ಮದಾಗಿಸಿಕೊಂಡರು.

ಶತಮಾನಗಳ ಹಿಂದೆ ರಾಜ ವಂಶಸ್ತರ ಕಾಲದಲ್ಲಿ ಶಿರಸಿ ತಾಲೂಕಿನ ಸ್ವಾದಿ ದಿಗಂಬರ ಜೈನ ಮಠದಲ್ಲಿ ಶರನ್ನವರಾತ್ರಿಯ ಕೊನೆ ದಿನ ವಿಜಯ ದಶಮಿಯಂದು ಮಠದ ಆಶ್ರಯದಲ್ಲಿದ್ದ ಐದು ಆನೆಗಳಿಗೆ ಅಲಂಕಾರ ಮಾಡಿ ಅಂಬಾರಿ ಮೆರವಣಿಗೆ ವೈಭವೋಪೇತವಾಗಿ ನಡೆಸಲಾಗುತ್ತಿತ್ತು. ಕಾಲ ಕ್ರಮೇಣ ಆನೆ ಅಂಬಾರಿ ಪದ್ದತಿ ನಿಂತು, ಸುಮಾರು ಒಂದುವರೆ ಶತಮಾನ ವಿಜಯ ದಶಮಿಯಂದು ಆನೆ ಅಂಬಾರಿ ಉತ್ಸವ ಮೆರವಣಿಗೆ ಇಲ್ಲದೆ ಕಳೆದು ಹೋಗಿತ್ತು. ಮಠದ ಪೀಠಾಧಿಪತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಠದ ಗತವೈಭವ ಹಾಗೂ ಮರೆಯಾದ ಸಂಪ್ರದಾಯವನ್ನು ಮತ್ತೆ ತರಲು ವಿಜಯ ದಶಮಿಯಿಂದ ಆನೆ ಅಂಬಾರಿ ಉತ್ಸವವನ್ನು ಸ್ವಾದಿ ಕ್ಷೇತ್ರದ ಪುಣ್ಯ ನೆಲದಲ್ಲಿ ಪ್ರಾರಂಭಿಸಿದ್ದರು. ಅದರಂಗವಾಗಿ ನಡೆದ ಉತ್ಸವದ ಮೆರವಣಿಯಲ್ಲಿ ಜಂಬೂ ಸವಾರಿ ವಿಶೇಷವಾಗಿ ಗಮನ ಸೆಳೆಯಿತು. ಶ್ರೀಗಳು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಸೇರಿದಂತೆ ಇತರ ಗಣ್ಯರು ಅಕಲಂಕರ ಭಾವಚಿತ್ರ ಹೊತ್ತ ಆನೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಮಠದಲ್ಲಿ ನವರಾತ್ರಿಯ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ಶ್ರೀಗಳು ಪಂಚಾಮೃತಾಭಿಷೇಕ ಪೂರ್ಣಗೊಳಿಸಿದರು. ನಂತರ ಶ್ರೀಮದ್ ಆಚಾರ್ಯ ಅಕಲಂಕರ ಭಾವಚಿತ್ರ ಹಾಗೂ ಚರಣ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ಶ್ರೀಗಳು ಅಂಬಾರಿ ಹೊತ್ತ ಸರ್ವಾಲಂಕಾರ ಆನೆಗೆ ಪೂಜೆ ನೆರವೇರಿಸಿದರು. ಎರಡು ಶ್ವೇತಾಶ್ವಗಳ ಸಾರಥ್ಯದಲ್ಲಿ ಜಂಬೂ ಸವಾರಿ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ಪೂರ್ಣ ಕುಂಭ ಹೊತ್ತು ಸಾಗಿದರು. ಡೊಳ್ಳು, ತಮಟೆ, ಶಹನಾಯಿ ವಾದನಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದವು. ನಿಶಿಧಿ ಬಳಿ ಇರುವ 21 ಪೂರ್ವಾಚಾರ್ಯರ ಪಾದುಕೆಗಳಿಗೆ ಶ್ರೀಗಳು ಪಂಚಾಮೃತ ಅಭಿಷೇಕ ನಡೆಸಿದರು. ಶಮಿ ಪೂಜೆಯ ನಂತರ ಬನ್ನಿ ವಿತರಣೆ ನೆರವೇರಿಸಿದರು.

ಮಠದಲ್ಲಿ ವಿಶೇಷ ಪಂಚಾಮೃತ ಅಭಿಷೇಕದ ನಂತರ ಪೂರ್ವಾಚಾರ್ಯರ ಪೂಜೆ, ಅಕಲಂಕರ ಪೂಜೆ ನಡೆಯಿತು. ಶ್ರೀಗಳಿಂದ ಪರಂಪರಾಗತ ಸದ್ದರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ ಕಾರ್ಯ ಸಾಂಗವಾಗಿ ಸಾಗಿತು. ನಂತರ ಮಠದಲ್ಲಿ ಸ್ವಾಮೀಜಿಯವರ ಪೀಠಾರೋಹಣ ಕಾರ್ಯಕ್ರಮ ನೆರವೇರಿತು. ಭಕ್ತಾಧಿಗಳಿಗೆ ಶ್ರೀಫಲಮಂತ್ರಾಕ್ಷತೆ ವಿತರಣೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಜಂಬೂ ಸವಾರಿ ಕಂಡು ಪುನೀತರಾದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.