ಜನವಸತಿ ಪ್ರದೇಶದಲ್ಲಿ ಘನತ್ಯಾಜ್ಯ ಘಟಕ ಬೇಡ: ಗ್ರಾಮಸ್ಥರಿಂದ ಉಪವಿಭಾಗಾಧಿಕಾರಿಗೆ ಮನವಿ

ಕುಮಟಾ: ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದನ್ನು ವಿರೋಧಿಸಿ ಹಂದಿಗೋಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬುಧವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಕೆಯ ಬಳಿಕ ಸ್ಥಳೀಯ ಮುಖಂಡ ಭಾಸ್ಕರ ಪಟಗಾರ ಮಾತನಾಡಿ, ತಾಲೂಕಿನ ಕಲಭಾಗ ಪಂಚಾಯತ ವ್ಯಾಪ್ತಿಯ ಹಂದಿಗೋಣದ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯತ ಮುಂದಾಗಿದ್ದು, ಈ ಘಟಕ ನಿರ್ಮಾಣಕ್ಕೆ ಸ್ಥಳೀಯರೆಲ್ಲರ ವಿರೋಧವಿದೆ. ಈ ಭಾಗದಲ್ಲಿ ಅಂಗವಿಕಲರು ಸೇರಿದಂತೆ ನೂರಾರು ಕುಟುಂಬಗಳು ನೆಲೆಸಿವೆ. ಸಾವಿರಾರು ಪ್ರಯಾಣಿಕರು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲು ಗ್ರಾಮ ಪಂಚಾಯತ ಮುಂದಾಗಿರುವುದು ಸರಿಯಲ್ಲ.

ಸಾರ್ವಜನಿಕರಿಗೆ ತೊಂದರೆ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ ಈ ಕೆಲಸಕ್ಕೆ ಮುಂದಾಗಿರುವುದು ವಿಪರ್ಯಾಸದ ಸಂಗತಿ ಇದರಿಂದ ಭವಿಷ್ಯದಲ್ಲಿ ಎಲ್ಲರಿಗೂ ತೊಂದರೆಯಾಗುತ್ತದೆ. ಈ ಕುರಿತು ಸಹಾಯಕ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ, ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದನ್ನು ತಡೆಯಬೇಕು. ಈ ಮೊದಲು ನಿಗದಿಯಾದಂತೆ ಸರ್ಕಾರಿ ಜಾಗವನ್ನು ಬಿಟ್ಟು ಖಾಸಗಿ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗಿರುವ ಗ್ರಾ.ಪಂ.ನ ನಡೆತೆ ಪ್ರಶ್ನಾರ್ಹವಾಗಿದೆ. ಸರ್ಕಾರ ಕೂಡಲೇ ಈ ನಿರ್ಣಯವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಕೆಯಲ್ಲಿ ಸ್ಥಳೀಯರಾದ ಸೋಮ ಮಂಜು ಪಟಗಾರ, ಸವಿತಾ ವಿ. ಪಟಗಾರ, ತುಳಸಿ ಗಣಪತಿ ಪಟಗಾರ, ಚಂದ್ರಕಲಾ ದತ್ತು ಪಟಗಾರ, ತಿಮ್ಮಪ್ಪ ನಾಯ್ಕ, ಶ್ಯಾಮಲಾ ಆರ್. ಪಟಗಾರ, ಮಮತಾ ಮಾದೇವಿ ಪಟಗಾರ, ಸಾವಿತ್ರಿ ಎಲ್. ಪಟಗಾರ, ಮಂಜುಳಾ ಪಟಗಾರ, ಭವಾನಿ ಪಟಗಾರ, ಲಲಿತಾ, ಲಕ್ಷಿ ್ಮೀ, ಶಶಿಕಲಾ ಗೌರೀಶ, ಜಾನಕಿ ಪಟಗಾರ ಮತ್ತಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.