ಕಾಡು ಹಂದಿಗಳ ಕಾಟದಿಂದ ಬೆಳೆ ರಕ್ಷಿಸಿಕೊಡಿ: ಸಾರ್ವಜನಿಕರಿಂದ ಸರ್ಕಾರಕ್ಕೆ ಮನವಿ

ಕುಮಟಾ: ತಾಲೂಕಿನಾದ್ಯಂತ ರೈತರು ಬೆಳೆದ ಬೆಳೆಗಳಿಗೆ ಕಾಡು ಹಂದಿಗಳ ಕಾಟ ವಿಪರೀತವಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಳೆಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸಾರ್ವಜನಿಕರು ಬುಧವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಕುಮಟಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರಿಗೆ ಕಾಡು ಹಂದಿಯಿಂದ ರಕ್ಷಣೆ ಬೇಕಾಗಿದೆ. ಹಂದಿಗೋಣ, ಧಾರೇಶ್ವರ, ವಕ್ಕನಳ್ಳಿ, ಮದ್ಗುಣಿ, ಹೊಲನಗದ್ದೆ, ಬರ್ಗಿ, ಮೂರೂರು ಮತ್ತು ವಾಲಗಳ್ಳಿ ಸೇರಿದಂತೆ ಬಹುತೇಕ ಎಲ್ಲ ಪಂಚಾಯತ ವ್ಯಾಪ್ತಿಯಲ್ಲಿ ಹಂದಿಗಳ ಕಾಟ ಅಧಿಕವಾಗಿದೆ. ಇದರಿಂದ ರಾತ್ರಿ ವೇಳೆ ಸಂಚಾರ ಮಾಡುವವರಿಗೂ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ರೈತರ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಅಲ್ಲದೇ, ಕಾಡು ಹಂದಿಗಳಿಂದ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಮುಂದಿನ ದಿನಗಳಲ್ಲಿ ಪ್ರಾಣಹಾನಿಯೂ ಸಂಭವಿಸಬಹುದು. ಈ ಬಗ್ಗೆ ಸಂಬಂಧಿಸಿದ ಇಲಾಖೆಯು ಹಂದಿಗಳ ನಿಯಂತ್ರಣಕ್ಕೆ ಮುಂದಾಗಬೇಕಿರುವುದು ಅನಿವಾರ್ಯವಾಗಿದೆ ಎಂದರು.

ಮನವಿ ಸ್ವೀಕರಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣಕುಮಾರ ಬಸ್ರೂರ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಕಾಡು ಹಂದಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿರುವುದು ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೇ ರಾತ್ರಿ ವೇಳೆ ಸಂಚರಿಸುವ ಜನರಿಗೂ ತೊಂದರೆಯಾಗುತ್ತಿದೆ. ಇಳಿಜಾರು ಪ್ರದೇಶದಲ್ಲಿ ಚೈನ್‍ಲಿಂಕ್ ಮೆಶ್ ಮಾಡಿದರೆ ಹಂದಿಗಳು ಹೊಲಗದ್ದೆಗಳಿಗೆ ಬರುವುದನ್ನು ತಡೆಯಬಹುದು. ಚೈನ್‍ಲಿಂಕ್ ಮೆಶ್ ಮಾಡಿ ಹಂದಿಗಳನ್ನು ತಡೆಯುವ ಪ್ರಯತ್ನ ಮಾಡಿ ಎಂದು ಜನರಿಂದ ಸಲಹೆ ಬಂದಿದೆ.

ಈಗಾಗಲೇ ಅರಣ್ಯ ಇಲಾಖೆಯು ಈ ಬಗ್ಗೆ ಸರ್ವೇ ಮಾಡುತ್ತಿದ್ದೇವೆ. ವಿಶಾಲವಾದ ಕಾಡುಗಳಿರುವುದರಿಂದ ಒಂದೇ ಬಾರಿ ಎಲ್ಲ ಪ್ರದೇಶಗಳಲ್ಲಿ ಚೈನ್‍ಲಿಂಕ್ ಮೆಶ್ ನಿರ್ಮಾಣ ಮಾಡುವುದು ಕಷ್ಟಸಾಧ್ಯ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಥವಾ ಇನ್ನಾವುದಾದರೂ ತಂತ್ರಜ್ಞಾನಗಳನ್ನು ಅಳವಡಿಸಿ ಕಾಡು ಪ್ರಾಣಿಗಳು ರೈತರ ಹೊಲಗಳಿಗೆ ಅಥವಾ ಜನ ಸಂಚಾರ ಪ್ರದೇಶಕ್ಕೆ ಬರದಂತೆ ತಡೆಯಲು ಕ್ರಿಯಾಯೋಜನೆ ತಯಾರಿಸಿ ಎಂದು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆ ಕಳಿಸುತ್ತೇವೆ. ಕಾಡು ಪ್ರಾಣಿಯಿಂದ ರೈತರಿಗೆ ಉಂಟಾಗಿರುವ ಬೆಳೆಹಾನಿಗೆ ಕೂಡಲೇ ಪರಿಹಾರ ಕೊಡಲಾಗುವುದು. ಬೆಳೆ ಹಾನಿಯಾದ ರೈತಾಪಿ ಸಮುದಾಯ ಬೆಳೆ ಪರಿಹಾರದ ಅರ್ಜಿಗಳನ್ನು ಭರ್ತಿಮಾಡಿ ಅರಣ್ಯ ಇಲಾಖೆಗೆ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಧಾರೇಶ್ವರ ಗ್ರಾಮ ಪಂಚಾಯತ ಅಧ್ಯಕ್ಷ ಎಸ್.ಟಿ.ನಾಯ್ಕ, ಹೊಲನಗದ್ದೆ ಪಂಚಾಯತ ಅಧ್ಯಕ್ಷ ರಾಘವೇಂದ್ರ ಪಟಗಾರ, ವಾಲಗಳ್ಳಿ ಪಂಚಾಯತ ಉಪಾಧ್ಯಕ್ಷ ಹನುಮಂತ ಪಟಗಾರ, ಕ.ರ.ವೇ. ಪದಾಧಿಕಾರಿ ತಿಮ್ಮಪ್ಪ ನಾಯ್ಕ ಮತ್ತಿತರರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.