ಹರಿಹರಪುರದಲ್ಲಿ ಸೆ. 21 ಕ್ಕೆ ರಾಜ್ಯ ಮಟ್ಟದ ಪರಿಸರ ಸಮಾವೇಶ


ಶಿರಸಿ: ಪರಿಸರ ಸಂರಕ್ಷಣೆ ಹಾಗೂ ಜಲ ಸಂವರ್ಧನೆ ಕುರಿತು ರಾಜ್ಯ ಮಟ್ಟದ ಸಮಾವೇಶ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪ ಹರಿಹರಪುರದ ತುಂಗಾ ತೀರದಲ್ಲಿ ಸೆ.21 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆವರೆಗೆ ನಡೆಯಲಿದೆ.

ಪ್ರಭೋದಿನಿ ಗುರುಕುಲ ಆರಂಭಗೊಂಡು 24 ವರ್ಷಗಳು ಸಂದಿದ್ದು ಇದಕ್ಕೆ ಅರ್ಧಮಂಡಲ ಉತ್ಸವ ಎಂದು ಹೆಸರಿಸಲಾಗಿದೆ. ವರ್ಷ ಪೂರ್ತಿ ನಡೆಯುವ 24ನೇ ವರ್ಷ ಆಚರಣೆ ಅಂಗವಾಗಿ ಪರಿಸರ ಸಮಾವೇಶ ನಡೆಯಲಿದೆ. ವೃಕ್ಷ ಲಕ್ಷ ಆಂದೋಲನ, ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಮುಂತಾದ ಸಂಘಟನೆಗಳು ಸಹಯೋಗ ನೀಡಲಿವೆ.

ಅರಣ್ಯ ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ವೃಕ್ಷಲಕ್ಷ ಆಂದೋಲನದ ನೇತಾರ ಅನಂತ ಹೆಗಡೆ ಅಶೀಸರ, ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ಪ್ರೊ. ಬಿ.ಎಂ. ಕುಮಾರಸ್ವಾಮಿ, ರಾಜ್ಯ ಔಷಧೀ ಸಸ್ಯ ಪ್ರಾಧಿಕಾರದ ವಿಜ್ಞಾನಿ ಡಾ. ಕೇಶವ ಹೆಚ್.ಕೊರ್ಸೆ, ಪರಿಸರ ಬರಹಗಾರ ಪತ್ರಕರ್ತ ರಾಧಾಕೃಷ್ಣ ಬಡ್ತಿ, ವನವಾಸಿ ಮುಖಂಡ ಶಾಂತಾರಾಂ ಸಿದ್ದಿ ಮುಂತಾದ ಪರಿಸರ ಗಣ್ಯರು ಆಗಮಿಸಿ ಮಾರ್ಗದರ್ಶನ ನೀಡಲಿದ್ದಾರೆ.

ಉದ್ದೇಶ: ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಪರಿಸರ ಸಂಘ, ಸಂಸ್ಥೆ, ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. ಬಯಲುಸೀಮೆ, ಮಲೆನಾಡು, ಕರಾವಳಿಯ ಪರಿಸರ ಜಲಸಂಬಂಧೀ ವಿಷಯಗಳ ಮೇಲೆ ಸಮಾಲೋಚನೆ, ಸಂವಾದ, ತಜ್ಞರ ಮಾರ್ಗದರ್ಶನ ನಡೆಯಲಿದೆ. ಪ್ರಚಲಿತ ಅರಣ್ಯ, ಜೀವ ವೈವಿಧ್ಯ ಪರಿಸ್ಥಿತಿ ಏನಾಗಿದೆ. ಇದಕ್ಕಾಗಿ ಏನೆಲ್ಲ ಸಂರಕ್ಷಣ-ಸಂವರ್ಧನಾ ಕಾರ್ಯಗಳು ನಡೆಯುತ್ತಿವೆ ಎಂಬ ಬಗ್ಗೆ ಮಾಹಿತಿ ಸಿಗಲಿದೆ. ಅದೇ ರೀತಿ ಸಮಾನ ಮನಸ್ಕ ಸಂಘ-ಸಂಸ್ಥೆಗಳು, ಕಾರ್ಯಕರ್ತರು ಒಟ್ಟಿಗೆ ಸೇರಿ ಕೈಗೊಳ್ಳಬೇಕಾದ ಪರಿಸರ ಕಾರ್ಯ ಚಟುವಟಿಕೆಯ ಬಗ್ಗೆ ಸಮಾಲೋಚನೆ, ನಿರ್ಧಾರಗಳಾಗಲಿವೆ ಎಂದು ವೃಕ್ಷಲಕ್ಷ ಸಂಘಟನೆ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.