ಕ್ಯಾಶ್ಯೂ ಕಂಪನಿ ಸಂಧಾನ ಮಾತುಕತೆ ವಿಫಲ: ಮತ್ತೆ ಕಾರ್ಮಿಕರ ಧರಣಿ

ಕುಮಟಾ: ಇತ್ತೀಚಿಗೆ ಕಾರ್ಮಿಕ ಇಲಾಖೆಯ ಮಧ್ಯಸ್ಥಿಕೆಯಲ್ಲಿ ನಡೆದ ರಿಲೇಬಲ್ ಕ್ಯಾಶ್ಯೂ ಕಂಪನಿಯ ಮಾಲಿಕರ ಹಾಗೂ ಕಾರ್ಮಿಕರ ಸಂಧಾನ ಮಾತುಕತೆ ಸಭೆಯು ವಿಫಲವಾಗಿದ್ದು, ಕಂಪನಿಯ ಮಾಲಿಕರು ಅಧಿಕಾರಿಗಳ ಆದೇಶವನ್ನು ಗಾಳಿಗೆ ತೂರುವ ಮೂಲಕ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಮನನೊಂದ ಕಾರ್ಮಿಕರು ಶುಕ್ರವಾರ ಪುನಃ ಶಾಂತಿಯುತ ಧರಣಿ ನಡೆಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯ ಮಾಲಿಕರು ಮತ್ತು ಕಾರ್ಮಿಕರ ನಡುವೆ ಉಂಟಾಗಿರುವ ಗೊಂದಲಕ್ಕೆ ಸಂಧಾನ ಮಾತುಕತೆ ಸಭೆಯ ಮಾತಿನ ಪ್ರಕಾರ ಸೆಪ್ಟೆಂಬರ್ 12 ರಂದು ಪುನಃ ಕ್ಯಾಶ್ಯೂ ಪ್ಯಾಕ್ಟರಿ ಕಾರ್ಯಾರಂಭ ನಡೆಸಬೇಕಿತ್ತು. ಕಾರ್ಮಿಕ ಇಲಾಖೆಯ ಡೆಪ್ಯುಟಿ ಲೇಬರ್ ಕಮಿಷನರ್ ವೆಂಕಟೇಶ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಪನಿಯು ಪುನಃ ಕಾರ್ಯಾರಂಭವಾಗಬೇಕು ಮತ್ತು ಕಾರ್ಮಿಕರೂ ಕೂಡ ಯಾವುದೇ ಸಂಘರ್ಷಕ್ಕೆ ಇಳಿಯದೇ ಸಮಸ್ಯೆಯನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದ್ದವು.

ಡೆಪ್ಯುಟಿ ಲೇಬರ್ ಕಮಿಷನರ್ ವೆಂಕಟೇಶ, ಅಸಿಸ್ಟಂಟ್ ಲೇಬರ್ ಕಮಿಷನರ್ ಮೀನಾಕುಮಾರಿ ಪಾಟೀಲ್, ಜಿಲ್ಲಾ ಲೇಬರ್ ಕಮಿಷನರ್ ಜೋಗುರ, ತಾಲೂಕಾ ಲೇಬರ್ ಇನ್ಸಪೆಕ್ಟರ್ ಬಡಿಗೇರ ಅವರ ನೇತೃತ್ವದಲ್ಲಿ ನಡೆದ ಕೋರ್ಟಿನ ಆದೇಶವನ್ನು ಕಂಪನಿಯ ಮಾಲಿಕರು ತಿರಸ್ಕರಿಸುವ ಮೂಲಕ ಕಾನೂನನ್ನು ಅವಮಾನಿಸಿದ್ದಾರೆ. ಮುಂದಿನ ಒಂದೆರಡು ದಿನದಲ್ಲಿ ಕಂಪನಿಯನ್ನು ಪ್ರಾರಂಭಗೊಳಿಸದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಉತ್ತರಕನ್ನಡ ಜಿಲ್ಲೆ ಕ್ಯಾಶ್ಯೂ ಇಂಡಸ್ಟ್ರೀ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ತಿಲಕ ಗೌಡ, ಸಂಘದ ಪದಾಧಿಕಾರಿಗಳಾದ ಸದಾನಂದ ನಾಯ್ಕ, ಸರೋಜಾ ಪಟಗಾರ, ಚಂದ್ರಕಲಾ ಪಟಗಾರ, ಕುಸುಮಾ ಪಟಗಾರ, ರೇವತಿ ನಾಯ್ಕ ಹಾಗೂ ಇತರರು ಎಚ್ಚರಿಸಿದ್ದಾರೆ.

ನಿರಂತರ 9 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ: ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರೀಯನ್ನು ಮಾಲಿಕರು ಏಕಾಏಕಿ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಪ್ಯಾಕ್ಟರಿ ಎದುರು ಕಳೆದ 9 ದಿನದಿಂದಲೂ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

8 ಗಂಟೆಯ ಕಾಲಾವಧಿಯ ಪ್ರಕಾರ ದಿನದಲ್ಲಿ 3 ಪಾಳಿಗಳು ನಡೆಯುತ್ತ ಬಂದಿದೆ. ಆದರೆ ಇತ್ತೀಚಿಗೆ ಆಡಳಿತ ಮಂಡಳಿಯವರು ದಿನದಲ್ಲಿ 2 ಪಾಳಿಯನ್ನು ನಡೆಸಲು ಚಿಂತನೆಗಳನ್ನು ನಡೆಸಿದ್ದಾರೆ. ಕಳೆದ 9 ದಿನದ ಹಿಂದಷ್ಟೇ ಯಾವ ಕಾರ್ಮಿಕರಿಗೂ ತಿಳಿಸದೇ, ಕೆ.ಜಿ.ಯ ಲೆಕ್ಕದಲ್ಲಿ ಕೆಲಸವನ್ನು ನೀಡಲಾಗುವುದು ಎಂದು ನೋಟೀಸ್ ಬೋರ್ಡಿಗೆ ಅಂಟಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಆದರೆ ಇವರು ಯಾವುದೇ ಚರ್ಚೆಗೂ ಅವಕಾಶವನ್ನು ನೀಡದೇ ನಿಮಗೆ ಆದರೆ ಕೆಲಸ ಮಾಡಿ. ಇಲ್ಲವಾದರೆ ಬಿಟ್ಟು ಹೋಗಬಹುದೆಂದು ತಿಳಿಸಿದ್ದರೆನ್ನಲಾಗಿದೆ.

ನಮಗೆ ಮೊದಲಿನಂತೆಯೇ 3 ಪಾಳಿ ಇರಬೇಕು. ಕೆ.ಜಿಯ ಲೆಕ್ಕದಲ್ಲಿ ಸಂಬಳವನ್ನು ನೀಡದೇ ಹಿಂದಿನಂತೆಯೇ ಸಂಬಳವನ್ನು ಮುಂದುವರೆಸಬೇಕೆಂಬುದು ಕಾರ್ಮಿಕರ ಬೇಡಿಕೆಯಾಗಿದೆ. ಆದರೆ ಇದ್ಯಾವುದನ್ನೂ ಕಿವಿಯ ಮೇಲೆ ಹಾಕಿಕೊಳ್ಳದ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿ ಆಡಳಿತ ವರ್ಗದವರು ಅಲ್ಲಿಂದ ಜಾಗವನ್ನು ಖಾಲಿ ಮಾಡಿದವರು ಮತ್ತೆ ಯಾರೂ ಕೂಡ ಪ್ಯಾಕ್ಟರಿಯ ಕಡೆಗೆ ಬಂದಿರಲಿಲ್ಲ. ಆದರೆ ಕಾರ್ಮಿಕರು ಮಾತ್ರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿಲ್ಲ. ಪಾಳಿ ಪ್ರಕಾರ ಕೆಲಸಕ್ಕೆ ಬಂದು ಬೀಗ ಹಾಕಿದ ಪ್ಯಾಕ್ಟರಿ ಎದುರು ಮೌನ ಪ್ರತಿಭಟನೆ ಮುಂದುವರೆಸಿದ್ದಾರೆ.

ಕಾರ್ಮಿಕ ಇಲಾಖೆಯು ಕರೆದ ಸಭೆಗೆ ಹಾಜರಾದ ಕಂಪನಿಯ ಮಾಲಿಕರು, ಕಂಪನಿಯನ್ನು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಸಭೆಯಿಂದ ಹೋದವರು ಮತ್ತೆ ಕಂಪನಿಯನ್ನು ಪ್ರಾರಂಭಿಸಿಲ್ಲ. ಮಾಲಿಕರು ಕಂಪನಿಯ ಕಡೆಗೂ ಬಾರದೇ ಇರುವುದರಿಂದ ಕಾರ್ಮಿಕರು ಕಂಪನಿಯ ಹೊರಗೆ ಕುಳಿತು ಪುನಃ ಪ್ರತಿಭಟನೆ ಮುಂದುವರೆಸುವ ಪರಿಸ್ಥಿತಿ ಎದುರಾಗಿರುವುದು ವಾಸ್ತವಾಂಶವಾಗಿದೆ.

ಕಾರ್ಮಿಕರ ಹೋರಾಟ ಮುಂದುವರೆಯಲು ಆಡಳಿತ ವರ್ಗವೇ ಕಾರಣ. ಸಂಬಂಧಪಟ್ಟ ಮೇಲಧಿಕಾರಿಗಳ ಆದೇಶದಂತೆ ಸೆ. 12 ರಂದು ಆರಂಭಗೊಳ್ಳಬೇಕಿದ್ದ ಕ್ಯಾಶ್ಯೂ ಕಂಪನಿಯನ್ನು ಮಾಲಿಕರು ಹಾಗೂ ಆಡಳಿತ ವರ್ಗದವರು ತಡೆದಿರುವುದು ಕಾನೂನು ಬಾಹೀರವಾಗಿದೆ. ಈ ಕುರಿತು ಸರ್ಕಾರ ಚಿಂತಿಸಿ, ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಕಂಪನಿಯನ್ನು ಶೀಘ್ರ ಪುನರಾಂಭಗೊಳಿಸಬೇಕು. – ತಿಲಕ ಗೌಡ, (ಅಧ್ಯಕ್ಷ – ಕ್ಯಾಶ್ಯೂ ಇಂಡಸ್ಟ್ರಿ ಎಂಪ್ಲಾಯೀಸ್ ಯೂನಿಯನ್ ಉ.ಕ)

ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯನ್ನೇ ನಂಬಿಕೊಂಡು 800ಕ್ಕೂ ಅಧಿಕ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಕಾರ್ಮಿಕರಿಂದಲೇ ಈ ಕಂಪನಿ ಉತ್ತರಕನ್ನಡ ಜಿಲ್ಲೆಯಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. ಆದರೆ ಮಾಲಿಕರು ಹಾಗೂ ಆಡಳಿತ ವರ್ಗ ಯಾವ ಕಾರಣಕ್ಕಾಗಿ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ಇಷ್ಟು ದಿನ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ದೇವರ ಭಾವನೆಯಲ್ಲಿ ಕಂಪನಿ ಹಾಗೂ ಮಾಲಿಕರನ್ನು ಕಾಣುತ್ತಿದ್ದೇವೆ. ತಾಳ್ಮೆಗೂ ಒಂದು ಮಿತಿಯಿದೆ. ಕುಮಟಾ ಹೊನ್ನಾವರ ಭಾಗದ ಕಾರ್ಮಿಕರು ತಾಳ್ಮೆ ಕಳೆದುಕೊಂಡರೆ ಈ ಬೃಹತ್ ಕ್ಯಾಶ್ಯೂ ಕಂಪನಿ ಉಳಿಯುವುದಿಲ್ಲ.  – ಸದಾನಂದ ನಾಯ್ಕ {ಕ್ಯಾಶ್ಯೂ ಕಂಪನಿಯ ಕಾರ್ಮಿಕ}

Categories: ಜಿಲ್ಲಾ ಸುದ್ದಿ

Leave A Reply

Your email address will not be published.