ಇಸ್ರೋ ಸಾಧನೆ ಇಡೀ ಜಗತ್ತೇ ಮೆಚ್ಚುವಂಥದ್ದು: ಮುರಳೀಧರ ಪ್ರಭು

ಕುಮಟಾ: ಇಸ್ರೋ ಸೋತಿಲ್ಲ. ಚಂದ್ರಯಾನ-2 ನೌಕೆಯ ಲ್ಯಾಂಡರ್ ಜತೆಗಿನ ಸಂಪರ್ಕ ಕಡಿತ ವೈಫಲ್ಯವೂ ಅಲ್ಲ. ಈಗಲೂ ಇಸ್ರೋ ಮಾಡಿರುವ ಸಾಧನೆ ಇಡೀ ಜಗತ್ತೇ ಮೆಚ್ಚುವಂಥದ್ದು ಹಾಗೂ ಚರಿತ್ರಾರ್ಹವಾದದ್ದು. ಭಾರತದ ಚಂದ್ರಯಾನ-2 ಯೋಜನೆ ಈಗ ಕಳೆದುಕೊಂಡಿರುವುದು ಶೇ 5ರಷ್ಟು ಉದ್ದೇಶಿತ ಕಾರ್ಯವನ್ನು ಮಾತ್ರ. ಶೇ 95 ರಷ್ಟು ಕಾರ್ಯ ಸಫಲವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಮುರಳೀಧರ ಪ್ರಭು ಅಭಿಪ್ರಾಯಪಟ್ಟರು.

ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ನಡೆದ ಚಂದ್ರಯಾನ 2 ಮತ್ತು ವ್ಯೋಮ ವಿಜ್ಞಾನದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ವಿಶೇಷ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದುವರೆಗೆ ಹಲವು ದೇಶಗಳು ಅನೇಕ ಚಂದ್ರಯಾನ ಯೋಜನೆಗಳನ್ನು ಕೈಗೊಂಡಿವೆ. ಅವುಗಳ ಪ್ರಯತ್ನದಲ್ಲಿ ವಿಫಲವೂ ಆಗಿವೆ, ಸಫಲತೆಯನ್ನೂ ಕಂಡಿವೆ.

ಈ ಎಲ್ಲ ಯೋಜನೆಗಳು ನಡೆದಿರುವುದು ಭೂಮಿಯಿಂದ ನಿಯಂತ್ರಿಸಲು ಸುಲಭವಾಗುವಂತಹ ಚಂದ್ರನ ಉತ್ತರ ಧ್ರುವದಲ್ಲಿ. ಚಂದ್ರಯಾನ-2ಗೆ ಭವಿಷ್ಯವಿದೆ. ಭಾರತ ತನ್ನ ಮೊದಲ ಚಂದ್ರಯಾನ ಯೋಜನೆಯನ್ನು ಯಶಸ್ವಿಯಾಗಿ ನಡೆಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ದಕ್ಷಿಣ ಧ್ರುವವನ್ನು ಇದುವರೆಗೂ ಯಾವ ದೇಶವೂ ಅಧ್ಯಯನಕ್ಕೆ ಒಳಪಡಿಸಿಲ್ಲ. ಇಲ್ಲಿ ನೌಕೆಯನ್ನು ಇಳಿಸಿ ಅಧ್ಯಯನ ಮಾಡಿದರೆ ಸೌರ ಮಂಡಲದ ಉಗಮದ ಬಗ್ಗೆ ಮಹತ್ವದ ಸುಳಿವು ಸಿಗಬಹುದು ಎಂಬ ಯೋಜನೆ ಮಾಡಿದ್ದೇ ಭಾರತದ ಹೆಮ್ಮೆಯ ಇಸ್ರೋ.

ಇನ್ನು ಬಾಹ್ಯಾಕಾಶದ ಬಗ್ಗೆ ತಿಳಿಯುವಂತೆ ಮಕ್ಕಳನ್ನು ಪ್ರೇರೇಪಿಸುವ ದೃಷ್ಟಿಯಿಂದ ಚಂದ್ರಯಾನ 2 ಮತ್ತು ವ್ಯೋಮ ವಿಜ್ಞಾನದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಉತ್ತರ ಕನ್ನಡದಲ್ಲಿಯೇ ಪ್ರಥಮ ಪ್ರಯೋಗ ಎಂದ ಅವರು, ಪ್ರಾಮಾಣಿಕವಾಗಿ ಶೃದ್ದೆಯಿಂದ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇಂದು ನಮ್ಮ ಕೊಂಕಣ ಎಜ್ಯುಕೇಶನ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಇಸ್ರೊದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಗಳಾಗಿ ಆಗಮಿಸಿದ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಎ.ಪಿ ಭಟ್ ಮಾತನಾಡಿ, ಚಂದ್ರನಲ್ಲಿಗೆ ಭಾರತದ ವಿಜ್ಞಾನಿಗಳು ಕೃತಕ ಉಪಗೃಹವನ್ನು ಹಾರಿಸಿ, ಚಂದ್ರನ ಕಕ್ಷಗೆ ತೂರಿ, ಚಂದ್ರನಲ್ಲಿ ಇಳಿಸುವಂತಹ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು.

ವಿವಿಧ ಹಂತಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿರ್ಮಲಾ ಕಾನ್ಮೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ 5000 ನಗದು ಬಹುಮಾನ ಪಡೆದರು. ದ್ವಿತೀಯ ಬಹುಮಾನವನ್ನು ವಿದ್ಯಾ ಭಾರತಿ ಪ್ರೌಢಶಾಲೆ ಭಟ್ಕಳದ ವಿದ್ಯಾರ್ಥಿಗಳು ಪಡೆದು 2500 ನಗದು ಬಹುಮಾನ ಪಡೆದರು. ನ್ಯೂ ಇಂಗ್ಲೀಷ್ ಸ್ಕೂಲ್ ಹೊನ್ನಾವರದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದು 1500 ರೂ ನಗದನ್ನು ತಮ್ಮದಾಗಿಸಿಕೊಂಡರು. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಯಿತು.

ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವಿಠ್ಠಲ್ ಆರ್. ನಾಯಕ, ಟ್ರಸ್ಟಿಗಳಾದ ರಮೇಶ ಪ್ರಭು ಉಪಸ್ಥಿತರಿದ್ದರು. ಶಿಕ್ಷಕ ರವಿಶಂಕರ ಭಟ್ಟ ಸ್ವಾಗತಿಸಿ, ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ಚಿದಾನಂದ ಭಂಡಾರಿ, ರಾಜೇಶ್ ಎಚ್.ಜಿ, ಪ್ರಕಾಶ ಗಾವಡಿ, ರವೀಂದ್ರ ಕಿಣಿ ಮುಂತಾದವರು ಸಹಕರಿಸಿದರು. ಮುಖ್ಯಶಿಕ್ಷಕಿ ಸುಮಾ ಪ್ರಭು ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.