ಹೊಂಡಮಯ ರಸ್ತೆ: ಕಾತೂರ ಬಳಿ ಲಾರಿ ಸಿಲುಕಿ ಸಂಚಾರಕ್ಕೆ ಅಡ್ಡಿ

ಮುಂಡಗೋಡ: ತಾಲೂಕಿನ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಕಾತೂರ ಬಸ್ ನಿಲ್ದಾಣದ ಹತ್ತಿರ ಹೆದ್ದಾರಿಯಲ್ಲಿಯೇ ಬಿದ್ದಿರುವ ಗುಂಡಿಯಲ್ಲಿ ಎರಡು ಲಾರಿಗಳು ಸಿಲುಕಿಕೊಂಡು ಎರಡು ತಾಸುಗಳ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡು ವಾಹನ ಚಾಲಕರು ಮತ್ತು ಪ್ರಯಾಣಿಕರು ಪರದಾಡುವಂತಾಗಿ ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾತೂರ ಗ್ರಾಮದ ಬಸ್ ನಿಲ್ದಾಣದ ಬಳಿ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ- ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ರಾತ್ರಿ ಲಾರಿಯೊಂದು ಗುಂಡಿಗೆ ಬಿದ್ದ ಪರಿಣಾಮ ಎಕ್ಸೆಲ್ ತುಂಡಾಗಿ ಲಾರಿಯನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು. ಪಕ್ಕದಲ್ಲಿರುವ ಗುಂಡಿಯಲ್ಲಿ ಟಿಪ್ಪರ್ ಕೂಡ ಸಿಲುಕಿಕೊಂಡ ಪರಿಣಾಮ ಸುಮಾರು ಎರಡು ತಾಸುಗಳ ವರೆಗೆ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ವಾಹನಗಳು ರಸ್ತೆಯ ಮೇಲೆ ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಟಿಪ್ಪರ್‍ನಲ್ಲಿದ್ದ ಕಲ್ಲನ್ನು ತೆಗೆದು ಜೆಸಿಬಿ ಮೂಲಕ ಎಳೆದು ಟಿಪ್ಪರ್ ಅನ್ನು ಪಕ್ಕದಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಜು ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಗ್ರಾಮಸ್ಥರು ಈ ರಸ್ತೆಯಲ್ಲಿ ಹಲವಾರು ಬಾರಿ ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಈ ಹಿಂದೆ ನಿಮ್ಮ ಇಲಾಖೆಗೆ ಗುಂಡಿಗಳನ್ನು ಮುಚ್ಚುವಂತೆ ತಿಳಿಸಿದ್ದೆವು. ಆದರೆ ಈವರೆಗೂ ನೀವು ಗುಂಡಿಗಳನ್ನು ಮುಚ್ಚಲಿಲ್ಲ. ಕೂಡಲೇ ರಾಜ್ಯ ಹೆದ್ದಾರಿಗಳಲ್ಲಿರುವ ದೊಡ್ಡ ಗುಂಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.