ಯಲ್ಲಾಪುರ ವಿ. ಸಭಾ ಬ್ಲಾಕ್ ಕಾಂಗ್ರೆಸ್‍ಗಳಿಗೆ ನೂತನ ಅಧ್ಯಕ್ಷರ ನೇಮಕ: ಭೀಮಣ್ಣ ನಾಯ್ಕ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕ್ರಮವಾಗಿ ಡಿ.ಎನ್.ಗಾಂವಕರ, ಕೃಷ್ಣ ಹೀರಳ್ಳಿ ಹಾಗೂ ಸಿ.ಎಫ್.ನಾಯ್ಕ ಅವರನ್ನು ನೇಮಿಸಲಾಗಿದೆ.

ಈ ಕುರಿತು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಆರ್.ವಿ. ದೇಶಪಾಂಡೆ, ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಬ್ಲಾಕ್ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ. ತಕ್ಷಣವೇ ಅಧ್ಯಕ್ಷರುಗಳು ಜನಪ್ರತಿನಿಧಿಗಳು, ಮುಖಂಡರ ಜೊತೆ ಸೇರಿ ಪಕ್ಷವನ್ನು ಸದೃಢ ಮಾಡುವ ಕಾರ್ಯ ಮಾಡಬೇಕು ಎಂದರು.

ಗೆಲ್ಲುವ ವಿಶ್ವಾಸ: ಕಾಂಗ್ರೆಸ್ ಪಕ್ಷದಿಂದ 2 ಬಾರಿ ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಯಲ್ಲಾಪುರ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿ, ಸಾವಿರಾರು ಕಾರ್ಯಕರ್ತರ ಅನಿಸಿಕೆ ಗಾಳಿಗೆ ತೂರಿ ರಾಜೀನಾಮೆ ನೀಡಿ ಹೋಗಿದ್ದಾರೆ. ಸ್ಥಳೀಯವಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಪುನಃ ಚುನಾವಣೆ ನಡೆದಲ್ಲಿ ಮರಳಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

ಯಲ್ಲಾಪುರ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಪಕ್ಷದಲ್ಲಿ ಇಲ್ಲದೇ ಹೋದರೂ ಅವರ ಹಿಂದೆ ನಿಜವಾದ ಕಾಂಗ್ರೆಸ್ ನವರು ಯಾರೂ ಹೋಗಿಲ್ಲ. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಸೇರಿ ಮಂತ್ರಿಯಾಗಿ ಬಂದು ಕೆಲಸ ಮಾಡುತ್ತೇನೆ ಎಂದು ಆಮೀಷ ತೋರಿಸಿದ ಪರಿಣಾಮ ಬನವಾಸಿ ಬ್ಲಾಕ್ ಕಾಂಗ್ರೆಸ್ ನ ಜನಪ್ರತಿನಿಧಿಗಳು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಆದರೆ ನಿಜವಾದ ಕಾಂಗ್ರೆಸ್ಸಿಗರು, ಅಭಿಮಾನಿಗಳು ನಮ್ಮಲ್ಲೇ ಉಳಿದಿದ್ದಾರೆ ಎಂದು ಹೇಳಿದರು.

ಕೊರತೆಯಿಲ್ಲ: ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದಲ್ಲಿ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಅಭ್ಯರ್ಥಿ ಆಯ್ಕೆಗೆ ಸಮಿತಿ ರಚನೆ ಮಾಡಲಾಗಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ನಂತರ ವರಿಷ್ಠರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದ ಅವರು, ಪಕ್ಷ ಸದೃಢವಾಗಿದ್ದು, ಉತ್ತಮ ಸಂಘಟನೆ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷರಿಗೆ ಜಿಲ್ಲಾಧ್ಯಕ್ಷರು ಆದೇಶ ಪತ್ರ ನೀಡಿದರು. ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗ್ವತ್, ದೀಪಕ ದೊಡ್ಡುರು, ಬಸವರಾಜ ದೊಡ್ಮನಿ ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.